Tuesday, November 19, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೩

ಹೋದ ಫೊಸ್ಟ್‌ನಲ್ಲಿ ಪೂಜಾರಿ ಅಂತ ಪ್ರಸ್ತಾಪ ಮಾಡಿದ್ನಲ್ಲ ಅವರ ಕೃಪೆ ಅತ್ಯವಶ್ಯಕ. ಕಂಪನಿಯ ಎಂ.ಡಿ ನಿಮಗೆ ಕೆಲಸ ಕೊಡಲು ಸಿದ್ಧರಿದ್ದರೂ ಮಾನವ ಸಂಪನ್ಮೂಲ/ಮಾ.ಸಂ(ಹ್ಯೂಮನ್ ರೆಸೋರ್ಸ್) ಅಧಿಕಾರಿಗಳು  ಅಭ್ಯರ್ಥಿ ಕರೆ ಸ್ವೀಕರಿಸುತ್ತಿಲ್ಲಾ, ವೃತ್ತಿ ಜಾತಕವನ್ನು ಅಭ್ಯರ್ಥಿ ಕಳಿಸಿಲ್ಲ ಅಂತ ಎಂ.ಡಿಗೆ ಸುಳ್ಳು ಹೇಳಿದರೆ ಕೆಲಸ ಸಿಗಲು ಸಾಧ್ಯವೆ? ಒಂದು ಖಾಲಿ ಹುದ್ದೆಗೆ ಹೊರ ರಾಜ್ಯದ  ಮಾ.ಸಂ ಅಧಿಕಾರಿ ಬಳಿ ಒಬ್ಬ ಅರ್ಹ ಕನ್ನಡಿಗನ ಹಾಗು ಅವನ ಊರಿನವನ ಅರ್ಜಿ ಸಿಕ್ಕಿದರೆ ಯಾವ ವೃ.ಜಾವನ್ನು ಪರಿಗಣಿಸುತ್ತಾನೆ? ಇದರ ಉತ್ತರ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

          Integrity(ಸಮಗ್ರತೆ/ಪೂರ್ಣತೆ/ಎಲ್ಲರಲೂ ಸಮಾನತೆ ಕಾಣುವ ಮನೊಭಾವ) ಅನ್ನೋದು ಕೇವಲ ಕನ್ನಡಿಗ ಮಾ.ಸಂ ಅಧಿಕಾರಿಗಳ ಸ್ವತ್ತು ಆಗಿ ಕನ್ನಡಿಗರಿಗೆ ಕುತ್ತು ಆಗಿದೆ. ಯಾವ ರಾಜ್ಯದ ಮಾ.ಸಂ ಅಧಿಕಾರಿಗೂ ಇಲ್ಲದ ಅಥವಾ ಕನಿಷ್ಟ ಮಟ್ಟದಲ್ಲಿರುವ ಇಂಟೆಗ್ರಿಟಿ ಎನ್ನುವ ಗುಣ ವಂಶವಾಹಿನಿಯಲ್ಲಿರುವ ಹಾಗೆ ವರ್ತಿಸುವುದು ಅತೀವ ದುಖ:ಕರ ಸಂಗತಿ. ಮಾ.ಸಂ ಅಧಿಕಾರಿಗಳಿಗೆ ಅವರದೆ ಆದ ಚೌಕಟ್ಟು ಇರುತ್ತದೆ ಎಂಬುದು ಗೊತ್ತು ಆದರೆ ಅಂಥದ್ದೆ ಚೌಕಟ್ಟಿನಲ್ಲಿ ಹೊರ ರಾಜ್ಯದ  ಮಾ.ಸಂ ಅಧಿಕಾರಿಯೂ ಸಹ ಕೆಲಸ ಮಾಡುತಿರುತ್ತಾರೆ ಹೀಗಿದ್ದರು ಕನ್ನಡಿಗರು ಮಣ್ಣು ತಿನ್ನುತ್ತಾರೆ ಹೊರಗಿನವರು ಕೆಲಸ ಗಿಟ್ಟಿಸಿ ಬೀಗುತ್ತಾರೆ. ಇಂತಹ ಪರಿಸ್ಥಿತಿ ಬದಲಾಗಬೇಕೆಂದರೆ ಮಾ.ಸಂ ಅಧಿಕಾರಿಯೂ ಕನ್ನಡಿಗರ ಏಳ್ಗೆಗೆ ಕೈ ಜೋಡಿಸಬೇಕಾದ್ದು ಅತ್ಯವಶ್ಯಕ, ಬೆರಳೆಣಿಕೆಯ ಸಂಖ್ಯೆಯಲ್ಲಿ ಅವರು ಸಿದ್ಧರಿರುತ್ತಾರೆ ಆದರೆ ಮುಂದೆ ಬರುವುದಿಲ್ಲ ಯಾಕೆಂದರೆ ನಮ್ಮ ಕನ್ನಡಿಗರಲ್ಲಿ ನಿಸ್ಸ್ವಾರ್ಥ ಸೇವೆ ಮಾಡುವವರಿಗೆ ಮರ್ಯಾದೆ ಇಲ್ಲ!! ಒಮ್ಮೆ  ಡಿಪ್ಲೋಮ ಮಾಡಿದವರಿಗೆ ೫ ಖಾಲಿ ಹುದ್ದೆಯಿರುವ ವಿಚಾರ
ತಿಳಿಯಿತು ಸರಿ ಅಂತ ನಾನು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನ ಪಕ್ಕದಲ್ಲಿರುವ ಡಿಪ್ಲೋಮ ಕಾಲೇಜಿನ ಮಾ.ಸಂ ಅಧಿಕಾರಿಗೆ ಕರೆ ಮಾಡಿ ವಿಚಾರ ಚರ್ಚಿಸಿದೆ. ಆ ವ್ಯಕ್ತಿ ತಮ್ಮ ಕಾಲೇಜಿನ ವಿಧ್ಯಾರ್ಥಿಗಳ ಭವಿಷ್ಯ ಯೋಚಿಸುವುದು ಬಿಟ್ಟು ನನಗೆ ನಿಮಗೆ ಏನು ಲಾಭ? ನೀವು ಯಾಕೆ ಈ ಕೆಲಸ ಮಾಡುತ್ತಿದ್ದೀರಾ? ಅಂತ ಉಲ್ಟಾ ನನಗೆ ಪ್ರಶ್ನೆ ಹಾಕಿದರು, ರಸ್ತೆಯಲ್ಲಿ ಹೋಗುತ್ತಿರುವನನ್ನು ಕರೆದು ಕೆರದಲ್ಲಿ ಹೊಡೆಸಿಕೊಂಡ ಹಾಗೆ ಆಯ್ತು ನನಗೆ! ಹೀಗೆ ನಮ್ಮ ಕನ್ನಡಿಗರು.          
   
   ಕನ್ನಡಿಗರಿಗೆ ಸಹಾಯ ಮಾಡಲು ಮುಂದಾದ ನನ್ನ ಕೆಲವು ಮಾ.ಸಂ ಅಧಿಕಾರಿ ಸ್ನೇಹಿತರಿಗೂ ಈ ರೀತಿ ಅನುಭವವಾಗಿ ಅವರು ಬೇಸತ್ತಿದ್ದಾರೆ ಇದು ಬದಲಾಗಬೇಕಾದರೆ ನಮ್ಮ ವ್ಯಕ್ತಿತ್ವ ಬದಲಾಗಬೇಕಿದೆ.
ಎನಗಿಂತ ಕಿರಿಯರಿಲ್ಲ,
ಶಿವ ಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ
ಅನ್ನೋ ಮಟ್ಟಕ್ಕೆ ನಾವು humble ಆಗಬೇಕಿದೆ ನಾಟಕೀಯ ಅನ್ನೊ ಮಟ್ಟಕ್ಕೆ ಇಲ್ಲದಿದ್ದರು ಒಂದು ಲೆವೆಲ್‌ಗೆ ಇದು ಇರಬೇಕು, ಸಹಾಯ ಮಾಡಿದವರಿಗೆ ಋಣಿಯಾಗಬೇಕಿದೆ ಎಲ್ಲದಕ್ಕೂ ಮಿಗಿಲಾಗಿ professional(ವೃತ್ತಿ ಪರ) ಆಗಬೇಕಿದೆ . ವೃತ್ತಿಪರತೆಯಲ್ಲಿ ಸಾವಿರ ಗುಣ ಸೇರಿಸಬಹುದು ಆದರೆ ಇಲ್ಲಿ ಸದ್ಯಕ್ಕೆ ನಮ್ಮ ವೃತ್ತಿ ಜೀವನ ಶುರು ಮಾಡಲು/ಸುಧಾರಿಸಲು ಇರಬೇಕಾದ ಕನಿಷ್ಟ ಅರ್ಹತೆ ತಿಳಿಯೋಣ.

Humbleness ಕೇವಲ ಡಾಂಭಿಕತೆ ಇದ್ದರೆ ದೇವ್ರಾಣೆಗು ಕ್ಷಣಿಕ ಕಾರ್ಯ ಆಗಬಹುದು ಧೀರ್ಘ್ಹ ಕಾಲದಲ್ಲಿ ನಿಮಗೆ ಮುಳುವಾಗುತ್ತೆ,

Focus ಏಕಾಗ್ರತೆಯಿಂದ ನಾವು ಒಂದು ಸಮಯದಲ್ಲಿ ಒಂದೆ ಗುರಿ ಇಟ್ಟುಕೊಂಡು ಅದನ್ನು ತಲುಪಲು ಶ್ರಮವಹಿಸಬೇಕು. ಎರಡು ದೋಣಿಯಲ್ಲಿ ಕಾಲಿಟ್ಟು ಮುಂದೆ ಸಾಗುತ್ತೇನೆ ಎಂದರೆ ಸಾಧ್ಯವೆ? ಹಾಗೆಯೆ ಒಂದು ಖಾಲಿ ಹುದ್ದೆಗೆ ಅದಕ್ಕೆ
ಸೂಕ್ತವಾದ ವೃ.ಜಾ ಮಾಡಿ ಅರ್ಜಿ ಸಲ್ಲಿಸಬೇಕು ಆಗಲೆ hit rate ಜಾಸ್ತಿ ಇರುತ್ತದೆ .

Discipline ಶಿಸ್ತು ಇಲ್ಲದೆ ಹೋದರೆ ಯಾವ ಕಾರ್ಯವು ಯಾವ ಕಾಲದಲ್ಲೂ ಆಗಲು ಸಾಧ್ಯವಿಲ್ಲ,

Honesty ಇದು ಒಂದು ಮಟ್ಟಕ್ಕೆ ಇರಬೇಕು ಯಾಕಂದರೆ  ನಿಯತ್ತು ಅನ್ನೋದು ಐಟಿ ಇಂಡುಸ್ಟ್ರಿ ಅಲ್ಲಿ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ. ನೀವು ಮಾಡಿಲ್ಲದ ಪ್ರಾಜೆಕ್ಟ್ ಹಾಕಿಕೊಂಡಿದ್ದರು ಪರವಾಗಿಲ್ಲ ಅದು ಇಂಟರ್ವ್ಯೂವ್ ಮಾಡುವವರಿಗೆ ಗೊತ್ತಾದರು ತಲೆ ಕೆಡಿಸಿಕೊಳಲ್ಲಾ ಆದರೆ ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟು ಪರಿಸ್ಥಿತಿ ನಿಭಾಯಿಸಲೇಬೇಕು. ಸುಮ್ಮನ್ನೆ ಮನಸಿಗ್ಗೆ ಅನಿಸಿದ್ದೆಲ್ಲ ಕಂಡವರು ಮಾಡಿದ್ದೆಲ್ಲಾ ನಾನೆ ಮಾಡಿದೆ ಅಂತ ಅರಗಿಸಿಕೊಳ್ಳದ ಮಟ್ಟಿಗೆ ಸುಳ್ಳು ಹೇಳಿದರೆ ಎಂತಹವರು ಒಪ್ಪುವುದಿಲ್ಲ. ಅದೆ ರೀತಿಯಾಗಿ ಸುಳ್ಳು ಅನುಭವದ ಪತ್ರ ಮಾಡಿಸಿ ಕೆಲಸ ಗಿಟ್ಟಿಸಿದರೆ ಯಾವ ದಿನ ಯಾವ ಕ್ಷಣ ನಿಮ್ಮ ಕಿತ್ತು ಹಾಕುತ್ತಾರೆ ಎನ್ನುವ ಖಾತ್ರಿ ಇರುವುದಿಲ್ಲ. ನೀವು ಸಂಸ್ಠೆಗೆ ಎಷ್ಟೆ ಬೇಕಿದ್ದರು ಯಾರು ತಲೆಕೆಡಿಸಿಕೊಳಲ್ಲ ಹಾಗಾಗಿ ಇಂಥ ಕೆಲಸ ಮಾಡಬೇಡಿರಿ ಸಣ್ಣದಾಗಿ ಆರಂಭವಾದ ನಿಮ್ಮ ವೃತ್ತಿ ಜೀವನ ಶಾಶ್ವತವಾಗಿ ಕೊನೆಗೊಳ್ಳಬಹುದು.

Dedication ಛಲ ಇಲ್ಲದೆ ಹೋದರೆ ಎಂಥಹ ಸಣ್ಣ ಕೆಲಸವು ಬೆಟ್ಟದ ಹಾಗೆ ಕಾಣುತ್ತದೆ. only when you can imagine the end, you can begin!! ಹಿರಿಯರಿಂದ/ಹಿತೈಷಿಗಳಿಂದ ಹರಸಿಕೊಳ್ಳುವ ನಮ್ಮ ಸಂಸ್ಕೃತಿಯು ಹಿಂದೆ ಅಡಗಿರುವ ಸತ್ಯವು ಇದೆ ಅಲ್ಲವೆ? ನೂರ್‌ಕಾಲ ಚೆನ್ನಾಗಿ ಬಾಳಿರಿ ಎಂದು ಹರಸಿದಿರೆ ಮೂರು ಕಾಲ ಹಾಗೆ ಬದುಕಿದರು ನೂರು ಕಾಲ ಬದುಕಿದಂತಲ್ಲವೆ? ನಮ್ಮ ಮನಸ್ಸಿನೊಳಗೆ ಚೆನ್ನಾಗಿ ಬಾಳುವುದು - ಮುಂದೆಂದೊ ಆಗಬೇಕಾಗಿರುವುದನ್ನು  ಊಹಿಸಿ ಅದರ ಸುತ್ತ ಚಿತ್ರಣ ಕಟ್ಟಿಕೊಳ್ಳುತ್ತೇವೆ ಅಲ್ಲವೆ? ಆ ಚಿತ್ರಣವೆ ನಾವು ಚೆನ್ನಾಗಿ ಬಾಳಲು ನಮ್ಮನ್ನು ಎಂತಹ ಕಷ್ಟ ಕಾಲದಲ್ಲು ಪ್ರೆರೇಪಿಸುತ್ತದೆಲ್ಲವೆ ಹಾಗೆಯೆ ಕೆಲಸ ಗಿಟ್ಟಿಸಲು ಮಾಡಬೇಕಾದ ಘಟ್ಟಗಳನ್ನು ಊಹಿಸಿ/ತಿಳಿದು ಅದಕ್ಕೆ ತಕ್ಕನಾಗಿ ಪರಿಶ್ರಮವಹಿಸಬೇಕು, ಸೋಲುಗಳಿಗೆ ಕುಗ್ಗ ಬಾರದು.

Cunningness (ಕತ್ತು ಕುಯ್ಯೊ cunningness ಅಲ್ಲ ಹೊಂಚು ಹಾಕಿ ನಮ್ಮ ಕೆಲಸ ಮುಗಿಸುವರಂತಹ ಸಮಯ ಸಾಧಕತೆ, ರಾಮ ವಾಲಿಯನ್ನು ನೇರವಾಗಿ ಎದುರಿಸದೆ ಹಿಂದಿನಿಂದ ಸಾಯಿಸಲಿಕ್ಕು ಸಹ ಒಪ್ಪುವಂತಹ ಕಾರಣಗಳಿವೆ, ಇದು ಸಹ ಸಮಯ ಸಾಧಕತೆಯ ಉದಾಹರಣೆ) ನಿಮ್ಮ ವೃ.ಜಾ ಸರಿಯಾದ ಸಮಯಕ್ಕೆ ಸರಿಯಾದ ಸ್ಠಳದಲ್ಲಿ ಇರಬೇಕೋ ಅದಕ್ಕೆ ನಿಮ್ಮ ಹಿತ ಬಯಸುವವರು ಶ್ರಮ ವಹಿಸಬೇಕಾಗುತ್ತದೆ. ಆ insider story ನೀವು ಪಡೆಯಬೇಕು, ಯಾರಿಗು ಸುಲಭವಾಗಿ ತಿಳಿಯಲಾಗದ ವಿಚಾರಗಳನ್ನು ನೀವು ಕಂಪನಿಯೊಳಗಿನವರಿಂದ ಸಂಪಾದಿಸಬೇಕು.

Opportunistic ಅವಕಾಶವಾದಿಯಾಗಬೇಕು, ಸಿಮ್‌ಪಲ್ ಆಗಿ ಒಂದ್ ಲವ್ ಸ್ಟೊರಿಲಿ ಡೈಲಾಗ್ ಇದೆಯಲ್ಲ "ಸಿಕ್ಕ ಅವಕಾಶಾನ ಸಂಪೂರ್ಣವಾಗಿ ಉಪಯೋಗಿಸ್ಕೊಬೇಕು" ಅಂತ ಆ ರೀತಿ ಜಾಣ್ಮೆಯಿಂದ ವರ್ತಿಸಬೇಕು, ಕೆಲಸ ಹುಡುಕುವಾಗ ಅಥವಾ ಎಲ್ಲಕ್ಕೂ ಮೂಲ ಇತರರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಬೇಕಿದೆ. ಈಗಿನ ಕಾಲದಲ್ಲಿ ಒಳ್ಳೆಯವರು ಸಿಗುವವರೆ ವಿರಳ ಅಂಥಾದ್ರಲ್ಲಿ ಆಪತ್ತಿಗಾದವೆನೆ ಆಪತ್ಭಾಂದವರಂತೆ ಸಹಾಯ ಮಾಡುವವರ ಗೆಳೆತನ/ಪರಿಚಯ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ?  ನಾಟಕೀಯ ಉಳಿಯುವುದಿಲ್ಲ ನಾವೆಲ್ಲಾ ಕನ್ನಡಿಗರು ಅನ್ನುವ ಒಗ್ಗಟ್ಟಿನ ಭಾವನೆ ನಮ್ಮ ಮನಸ್ಸಿನಲ್ಲಿದರೆ ಮಾತ್ರ ಸಂಬಂಧಗಳು ಹುಟ್ಟುತ್ತವೆ / ಉಳಿಯುತ್ತವೆ / ಬೆಳೆಯುತ್ತವೆ. ಕುವೆಂಪು ಹೇಳಿದಂತೆ "ಆಗು ಆಗು ನೀ ವಿಶ್ವ ಮಾನವನಾಗು" ಅನ್ನುವ ಮಾತನ್ನು ಕನಸ್ಸು ಮನಸ್ಸಿನಲ್ಲು ಪ್ರತಿಪಾದಿಸುವುದಿಲ್ಲ, ಆ ಮಾತನ್ನು ಮನಸ್ಸಿಗೆ ಹಚ್ಚಿಕೊಂಡ ಕನ್ನಡಿಗರು, ಕನ್ನಡಿಗರು, ಯೆನ್ನಡಿಗರು ಎಂಬ ಭಾವನೆ ಇಲ್ಲದೆ ಎಲ್ಲರಿಗು ಅವಕಾಶ ಮಾಡಿಕೊಟ್ಟು ಕೊನೆಗೆ ಎತ್ತರಕ್ಕೆ ಬೆಳೆದ ಯೆನ್ನಡಿಗರು ಕನ್ನಡಿಗರ ಬುಡಕ್ಕೆ ಕೊಡಲಿ ಇಟ್ಟು ಇಂದಿಗೆ ನಮ್ಮ ರಾಜ್ಯದಲ್ಲೆ, ರಾಜಧಾನಿಯಲ್ಲೆ ಕನ್ನಡಿಗರು ಕೆಲಸಕ್ಕೆ ಆಯ್ದುಕೊಂಡು ತಿನ್ನುವರಂತೆ
ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲ ನಮಗೆ ಬೇಕಾ??
                ಕಂಪನಿಗಳ ಮಾ.ಸಂ ಅಧಿಕಾರಿಗಳ/ಉನ್ನತ ಹುದ್ದೆಯಲ್ಲಿರುವವರ ಸಂಪರ್ಕಕ್ಕೆ ಸಿಗಬೇಕಾಗಿದೆ ಅವರು ಯಾಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ? ನೀವೆ ಅವರ ಬಳಿಗೆ ಹೋಗಬೇಕಿದೆ.ಸಹಾಯ ಯಾಚಿಸಬೇಕಿದೆ, ಕೈ ಚಾಚಿ ಬೇಡ ಬೇಕಿದೆ ವಿನಮ್ರತೆ ಇದ್ದಲ್ಲಿ ನಿಮಗೆ ಈ ಮಾತುಗಳು ಕಠೋರ ಎನಿಸುವುದಿಲ್ಲ ಅದೆ ಅಹಂಕಾರದಲ್ಲಿ ಮೆರೆಯುತ್ತಿದ್ದರೆ ನಾನೇಕೆ ಬೇರೆಯವರ ಮುಂದೆ ಕೈಯೊಡ್ಡಬೇಕು ಎಂಬ ಯೋಚನೆ ಬರದೆ ಇರಲಾರದು. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಮನೋಭಾವದ ಮೇಲಿದೆ.

                  ಟೈಂಪಾಸ್ ಮಾಡಲು/ಸ್ನೇಹ ಸಂಪಾದಿಸುವುದಕ್ಕೆ ಆನ್‌ಲೈನ್ ಏನೆಲ್ಲಾ ಮಾಡುತ್ತೀರಾ? ಮೊಬೈಲ್ ಅಲ್ಲೂ ಸಹ ಬಿಡದೆ ಫೇಸ್‌ಬುಕ್‌‍ಗೆ ಲಗ್ಗೆ ಹಾಕುವ ಜನರಿದ್ದಾರೆ. ಸಾಮಾನ್ಯವಾಗಿ ಒಂದು ಹುಡುಗಿ "ಇವತ್ತು ನಾನು ಬೆಳಗ್ಗೆ ಎದ್ದ ತಕ್ಷಣ ಸೀನಿದೆ " ಎಂದು ಪೋಸ್ತ್ ಮಾಡಿದರೆ ಅದನ್ನು ೧೦೦ ಜನ ಲೈಕ್ ಮಾಡುವವರಿದ್ದಾರೆ. ಈ ವಿಚಾರದ ಮೇಲೆಯೆ ದಿನ ಪೂರ್ತಿ ಚರ್ಚೆಯೆ ನಡೆದುಬಿಡುತ್ತದೆ!! ಅದು ತಪ್ಪಲ್ಲ ಅದರಿಂದ ತಿಳಿಯಬೇಕಾದದ್ದು ಟೈಂಪಾಸ್ ಮಾಡಲು/ಸ್ನೇಹಿತರೊಂದಿಗೆ ವಿಚಾರ ಹಂಚಿಕೊಳ್ಳುವ ಆತುರತೆ ತೋರಿಸುತ್ತದೆ. ಎಡೆಬಿಡದೆ ಆ ಪೋಸ್ಟ್ ನಲ್ಲಿ ಕಾಮೆಂಟ್ ಮಾಡುವುದು ಅವರ dedication ತೋರುತ್ತದೆ, ಹುಡುಗಿ/ಹುಡುಗನನ್ನು ಆರೊಗ್ಯ ವಿಚಾರಿಸುವ humbleness ಸಹ ಇರುತ್ತದೆ, opportunistic ಆಗಿ ಅವಳ/ಅವನ ಮನದ ಕೇಂದ್ರ ಬಿಂದುವಾಗುವ ಆತುರತೆಯಲ್ಲಿ ಮಾತಾನಾಡುವ ಅವಕಾಶವನ್ನು ಕಳೆದುಕೊಳ್ಳಬಾರದೆಂಬ ವಿಚಾರವಿಟ್ಟುಕೊಂಡು ನಡೆದುಕೊಳ್ಳುತ್ತಾರೆ. ಇಷ್ಟೆಲ್ಲ ಮಾಡಿದರೇನೆ ಫೇಸ್‌ಬುಕ್ ಅಲ್ಲಿ ಆನ್‌ಲೈನ್ ಸ್ನೇಹ ಉಳಿಯುವುದು.

ಮೊದಲು ಒಂದು ಐಡಿ ಸೃಷ್ಟಿಸ್ತೀರಾ, ನಂತರ ನಿಮ್ಮ ಬಗ್ಗೆ ತಿಳಿಸುವ ಕೇವಲ ಒಳ್ಳೆಯ ಗುಣಗಳನ್ನೆ ತುಂಬಿಸುತ್ತೀರ :). ಹುಟ್ಟಿದ ದಿನ, ಸಮಯ, ಸ್ಥಳ ಯಾವುದನ್ನು ಬಿಡದೆ ಸದ್ಯದವರೆಗಿನ ಎಲ್ಲಾ ಮಾಹಿತಿಯನ್ನು ತುಂಬುತ್ತೀರಾ.. ಆಮೇಲೆ ಪ್ರೊಫೈಲ್ ಹುಡುಕುತ್ತೀರಾ, ಸ್ನೇಹಿತರ ಸ್ನೇಹಿತರನ್ನು ಸ್ನೇಹಕ್ಕಾಗಿ ಕೈ ಚಾಚುತ್ತೀರಾ "ಅನ್ ಎ ಕ್ಲಿಕ್ ಆಫ್ ಬಟನ್". ಕಾಮನ್ ಫ್ರೆಂಡ್ಸ್ ಇದ್ದಾಗಲೆ ಸ್ನೇಹದ ಆಹ್ವಾನವನ್ನು ಸ್ವೀಕರಿಸುವುದು ಸುಲಭ ಆಗುತ್ತದೆ ಯಾಕೆಂದರೆ ನಿಮ್ಮನ್ನು ನಿಮ್ಮ ಫ್ರೆಂಡ್ refer ಮಾಡಿದಂತೆಯೆ ಅರ್ಥ. ನಿಮ್ಮ ನಂಬಿಕೆಯ ಮೇಲೆ ನಿಮ್ಮ ಸ್ನೇಹಿತರ ಆಹ್ವಾನ ಸ್ವೀಕರಿಸುತ್ತಾರೆ. ಫೇಸ್‌ಬುಕ್ ಐಡಿ ಕ್ರೀಯೇಟ್ ಆಗಿ ಸಣ್ಣದ ಸ್ನೇಹಿತರ ಗುಂಪು ಆಗಿದ್ದೆ ತಡ ಫೇಸ್‌ಬುಕ್ ಪೂರ್ತಿ ಕಾಮೆಂಟ್, ಪೋಸ್ಟ್‌ಗಳ ಧೂಳೊ ಧೂಳು.

               ಕೇವಲ ಟೈಮ್ ಪಾಸ್‌ನ ಒಂದು ಕಾನ್ಸೆಪ್ಟ್‌ಗೇನೆ ಇಷ್ಟು ಹರಸಾಹಸ ಮಾಡುವಾಗ ನಮ್ಮ ವೃತ್ತಿ ಜೀವನ ಚೆನ್ನಾಗಿರಲು ಏನೆಲ್ಲಾ ಮಾಡಬೇಕಾಗಬಹುದು ಎನ್ನುವುದು ಊಹೆಗೆ ನಿಲುಕದ ವಿಚಾರ. ಹೀಗಿರುವಾಗ ವೃತ್ತಿ ಜೀವನದಲ್ಲಿ ವೃತ್ತಿಪರರ ಪರಿಚಯ ಸ್ನೇಹಗಳಿಸಲು ಎಲ್ಲಿಗೆ ಹೊಗ್ತೀರಾ?

          ಇದಕ್ಕೆ ಉತ್ತರವಾಗಿಯೆ www.linkedin.com ಎನ್ನುವ ವೆಬ್ ತಾಣ ಇರುವುದು. ಇಲ್ಲಿ ನಿಮಗೆ ಉನ್ನತ ಹುದ್ದೆಯಲ್ಲಿರುವವರು, ನಿಮ್ಮ  ಉದ್ಯಮಕ್ಕೆ ಸೇರಿದ ವೃತ್ತಿಪರರು ಹಾಗು ನೀವು ಬಯಸುವ ಉದ್ಯಮದ ವೃತ್ತಿಪರರು ಸದಸ್ಯರಾಗಿರುವ ವೆಬ್ ತಾಣ. ಇದನ್ನು ನೀವು ಸ್ನೇಹಕ್ಕಾಗಿ, ಉದ್ಯೋಗಕ್ಕಾಗಿ ಅಥವಾ ವ್ಯವಾಹಾರಕ್ಕಾಗಲಿ ಉಪಯೋಗಿಸಬಹುದು.

          ಫೇಸ್ ಬುಕ್‌ನಂತೆಯೆ ಇಲ್ಲಿಯು ಸಹ ನಿಮಗೆ ಚರ್ಚೆ ಮಾಡಲು ವೇದಿಕೆ, ನಿಮ್ಮ ಅನಿಸಿಕೆ ಸ್ನೇಹಿತರೊಂದಿಗೆ ಹಂಚಿಕೊಳ್ಳಲು  ಕಾಮೆಂಟ್ ವಿಂಡೊ ಎಲ್ಲವೂ ಲಭ್ಯ.ಲಿಂಕ್ಡ್‌ಇನ್.ಕಾಂ ಉದ್ದೇಶ ವೃತ್ತಿಪರರು ಸಂಪರ್ಕದಲ್ಲಿರಲು ಅನುಕೂಲರಕರ ಜಾಲವನ್ನು ಸೃಷ್ಟಿಸುವುದು. ಚಾಕುವನ್ನು ತರಕಾರಿ ಕೊಯ್ಯಲು ಉಪಯೋಗಿಸಬಹುದು ಹಾಗೆಯೆ ಕೊಲೆ ಮಾಡಲು ಉಪಯೋಗಿಸಬಹುದು. ಲಿಂಕ್ಡ್‌ಇನ್.ಕಾಂ ಸಹ ಇದೆ ರೀತಿಯ ಅವಕಾಶ ಒದಗಿಸುತ್ತದೆ, ಅದನ್ನು ಉಪಯೋಗಿಸಿ
ನೀವು ವೃತ್ತಿಪರರ ಸ್ನೇಹ ಸಂಪಾದಿಸುತ್ತೀರೊ, ಉಪಯೋಗಿಸದೆಯೂ ಇರ್ತೀರೊ ಅಥವಾ ಟೈಂಪಾಸ್ ಮಾಡುತ್ತೀರೋ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.

ಮೇಲಾಗಿ www.linkedin.com ಅನ್ನು ಸಹ ಎಂಪ್ಲಾಯರ್‌ಗಳು, ವಿವಿಧ ಕಂಪನಿಯ ಮಾ.ಸಂ ಅಧಿಕಾರಿಗಳು ನಿಮ್ಮ ಪ್ರೊಫೈಲ್‌ಅನ್ನು ಲಿಂಕ್ಡ್‌ಇನ್.ಕಾಂ ಅಲ್ಲಿ ನಿಮ್ಮ ಬಗ್ಗೆ ಹೆಚ್ಚು ತಿಳಿಯುವ ಸಲುವಾಗಿ ಹುಡುಕುವ ಪ್ರವೃತ್ತಿ ಶುರು ಆಗಿದೆ. ಹಾಗಾಗಿ ಸಾಮಾಜಿಕವಾಗಿ ನೀವು ಯಾವ ರೀತಿ ಇರುತ್ತೀರಿ, ವಿಷಯ ಹಂಚಿಕೊಳ್ಳುತ್ತೀರಿ ಎಂದು ನಿಮ್ಮ ಚಟುವಟಿಕೆಗಳು ಮಾನಿಟರ್ ಆಗುವ ಸಂಭವ ಇದೆ.
ಹಾಗಾಗಿ ನಿಮ್ಮ ಪ್ರೊಫೈಲ್ ಅಚ್ಚುಕಟ್ಟಾಗಿರಲಿ, ಸಂಪೂರ್ಣವಾಗಿರಲಿ, ಮಾಹಿತಿ ಪೂರ್ಣವಾಗಿರಲಿ. ಕಂಪನಿಯಲ್ಲಿ ಹೇಗೆ ವೃತ್ತಿಪರರಂತೆ ಇರುತ್ತೀರೊ ಹಾಗೆಯೆ ಈ ತಾಣದಲ್ಲಿ ನಿಮ್ಮ ವೃತ್ತಿಪರತೆ ಪ್ರದರ್ಶಿಸಿರಿ.
   
             ಕನ್ನಡಿಗರ ಒಳಿತಿಗೆ ಅಂತಾನೆ ಇರುವ ಹಲವಾರು ಗೂಗಲ್ ಗ್ರೂಪ್‌ಗಳು, ಯಾಹೂ ಗ್ರೂಪ್‌ಗಳು, ಫೇಸ್ ಬುಕ್‌ನಲ್ಲಿ ಕನ್ನಡಿಗರ ಪರ ಗುಂಪುಗಳಿರುವ ಹಾಗೆ ಲಿಂಕ್ಡ್‌ಇನ್.ಕಾಂನಲ್ಲಿಯು ಸಹ ಕನ್ನಡಿಗರಿಗೆ ವೃತ್ತಿ ಪರರ ಮಾರ್ಗದರ್ಶನ, ಕನ್ನಡಿಗರಿಗೆ ಕೆಲಸದ ಅವಕಾಶಗಳ ಸುದ್ದಿ ತಲುಪಿಸುವ, ಕನ್ನಡಿಗರಿಗೆ ಸಂಬಂಧಿಸಿದಂತೆ ಚರ್ಚೆಯ ಸಲುವಾಗಿ IT_KANNADIGARU ಅಂತ ಗ್ರೂಪ್‌ ಇದೆ.

ಒಂದು ಗುಂಪಿನಲ್ಲಿ ಪ್ರಾಬ್ಲಂ ಶುರು ಆಗೊದು ಎಲ್ಲರು "ಪಡೆಯಬೇಕು" ಅಂತಲೆ ಇದ್ದಾಗ, "ಕೊಡಬೇಕು" ಅನ್ನೊದು ವಿರಳವಾದಾಗ. ನೀವು IT_KANNADIGARU ಗುಂಪಿನ ಸದಸ್ಯರಾಗಿ, ವೃತ್ತಿಪರರಾಗಿ ಇತರರಿಂದ ಪಡೆದು, ಇತರರಿಗೆ ಮಾರ್ಗದರ್ಶಕರಾದಾಗಲೆ ಕನ್ನಡಿಗರ ಗುಂಪಿಗೆ ಸಾರ್ಥಕತೆ ಸಿಗುವುದು.

ಕೊನೆಯ ಸಾಧನವೆ  "ಆನ್ ಲೈನ್ ಅಲ್ಲಿರುವ ಕನ್ನಡಿಗರ ಗುಂಪುಗಳು" ಅದರಲ್ಲಿ www.linkedin.com ಎಂಬ ಜಾಲತಾಣದಲ್ಲಿರುವ IT_KANNADIGARU ಕನ್ನಡಿಗರ ಗುಂಪು .  

ಗುಂಪಿಗೆ ಸೇರಲು ಈ ಕೊಂಡಿಯನ್ನು ಕ್ಲಿಕ್ ಮಾಡಿ http://www.linkedin.com/groups?jobs=&gid=2276827

ಇಲ್ಲಿಯವರೆಗೆ ವಿವರವಾಗಿ ಚರ್ಚಿಸಿದ ನಾಲ್ಕು ಸಾಧನಗಳು ನಮ್ಮ ಸಾಮಾನ್ಯ ಕನ್ನಡಿಗನಿಗೆ ಕೆಲಸ ಸಿಗಲು ಅತೀ ಅಗತ್ಯ. ತುಕ್ಕು ಹಿಡಿದಿರೊ ಕತ್ತಿಯಿಂದ ಯುದ್ಧ ಗೆಲ್ಲೊಕ್ಕೆ ಆಗುತ್ತಾ? ಹಾಗೆಯೆ ಇಲ್ಲಿ ತಿಳಿಸಿದ ಸಾಧನಗಳು ನಿಮ್ಮ ಬಳಿ ಇದ್ದು ಇಲ್ಲದ ಇರುವ ಹಾಗೆ ಇರಬಾರದು ಪಳ ಪಳ ಎನ್ನುವ ಕತ್ತಿಯ ಅಂಚಿನಂತೆ ಮೊನಚಾಗಿರಬೇಕು, ಅವಕಾಶ ಸಿಕ್ಕಾಗ ಎಗರಿ ಹೊಡೆದರೆ ಎದುರಾಳಿಯ ತಲೆ ಉರುಳಿ ನಿಮ್ಮ ಕಾಲ ಬಳಿ ಬೀಳುವ ಹಾಗೆ ಅಷ್ಟೆ aggressive ಆಗಿ, ನೀವಿಷ್ಟ ಪಟ್ಟ ಕೆಲಸಕ್ಕೆ ನಾಲ್ಕು ಸಾಧನಗಳನ್ನು ಉಪಯೋಗಿಸಿ ಛಲಬಿಡದೆ ಪ್ರಯತ್ನಿಸಿದರೆ ಅದು ತಪ್ಪದೆ ನಿಮ್ಮದಾಗುತ್ತದೆ. sureshot  ಕೆಲಸಕ್ಕಾಗಿ ತಿಳಿಸಿದ ನಾಲ್ಕು ಸಾಧನಗಳನ್ನು ನಿಮ್ಮದಾಗಿಸಿಕೊಳ್ಳಿ, ಕೆಲಸ ಸಿಗುವುದು ಖಂಡಿತ ಹಾಗು ಸುಲಭ.                

ಒಳ್ಳೆಯದಾಗಲಿ..
--ಪ್ರಸಾದ್

Tuesday, November 12, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೨

ನೀವು ವಿನಮ್ರ ಭಾವದ ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಷ್ಟಕ್ಕೆ ನಿಮ್ಮ ಅವಕಾಶಗಳು ಹೆಚ್ಚಾಗಬಹುದೆ ಹೊರತು ಕೆಲಸದ ಖಾತ್ರಿ ಆಗುವುದಕ್ಕೆ ಸಾಧ್ಯವಿಲ್ಲ.
ನೀವು ಯಾವುದಾದರು ಕಂಪ್ಯೂಟರ್ ಕೋರ್ಸ್ ಮಾಡುವ ಮುನ್ನ ಜಾಬ್ ಅಸ್ಸಿಸ್ಟೆನ್ಸ್ ಇರುವುದನ್ನೋ ಅಥವಾ ಜಾಬ್ ಗ್ಯಾರಂಟೀ ಹೇಳುವಂತಹ ಸಂಸ್ಥೆ ಆಯ್ಕೆ ಮಾಡಿಕೊಳ್ಳುತ್ತೀರೊ?  ಖಂಡಿತವಾಗಿಯು ಜಾಬ್ ಗ್ಯಾರಂಟೀ ಕೊಡುವ ಸಂಸ್ಥೆಯನ್ನೆ ಜಾಣರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಯಾವ ಜಾಣ ಸಂಸ್ಥೆಯು ಜಾಬ್ ಗ್ಯಾರಂಟೀ ಭರವಸೆ ಕೊಡುವುದೆ ಇಲ್ಲ. ಅವರು ಹೇಳುವುದಿಷ್ಟೆ ನಿಮಗೆ ನಾವು ಎಲ್ಲವನ್ನು ಹೇಳಿಕೊಡುತ್ತೇವೆ, ಕೆಲಸ ಸಿಗಲು ಸಹಾಯ ಮಾಡುತ್ತೇವೆ (ಜಾಬ್ ಅಸ್ಸಿಸ್ಟೆನ್ಸ್) ಹೊರತು ಕೆಲಸ ಕೊಡಿಸುವ (ಜಾಬ್ ಗ್ಯಾರಂಟೀ) ಭರವಸೆ ಕೊಡುವುದಿಲ್ಲ ಅಂತ ಹೀಗಿದ್ದ ಮೇಲೆ ನಿಮಗೆ ಕೆಲಸ ಸಿಗಲು ನಿಮ್ಮ ಪ್ರಯತ್ನವೆ ಮುಖ್ಯ ಎಂದಾಯಿತಲ್ಲವೆ?
   ಯಾವನಿಗೊ ಸಾವಿರಾರು ರುಪಾಯಿ ಕೊಟ್ಟು ಮತ್ತೆ ಬೀದಿಗೆ ಬಂದರೆ ಪ್ರಯೋಜನವೇನು? ಕೊಟ್ಟವನು ಕೋಡಂಗಿ ಈಸ್ಕೊಂಡೋನು ಈರಭದ್ರ ಎನ್ನುವ ಹಾಗೆ ಆಗಬಾರದು. ಹಾಗೆಂದ ಮಾತ್ರಕ್ಕೆ ಅವರು ಹೇಳಿಕೊಡುವ ಕೋರ್ಸ್‍ಗಳು ವೇಸ್ಟ್ ಎನ್ನುತ್ತಿಲ್ಲ.ಜ್ಞಾನ ಯಾವತ್ತು  ನಿಷ್‌ಪ್ರಯೋಜಕವಾಗುವುದಿಲ್ಲ, ಎಂದೆಂದಿಗೂ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತಿಲ್ಲ!!

ಎಲ್ಲಿ ಕೋರ್ಸ್ ಮಾಡುತ್ತೀರಾ, ಯಾವ ಮಟ್ಟದ ಕೋರ್ಸ್ ಮಾಡುತ್ತೀರಾ ಎನ್ನುವುದು ಅವಶ್ಯಕ.
ಉದಾಹರಣೆಗೆ :- ಒಂದು ಖಾಲಿ ಹುದ್ದೆಗೆ ಕನಿಷ್ಟ ಅರ್ಹತೆ ೯೦% ಇದೆ ಎಂದುಕೊಳ್ಳೊಣ ಎಲ್ಲಾ ವೃತ್ತಿ ಜಾತಕಗಳು ಪರಿಷ್ಕರಣೆಗೊಂಡು ಕೊನೆಗೆ ೧೦ ಅಭ್ಯರ್ಥಿಗಳು ಆಯ್ಕೆ  ಆಗುತ್ತಾರೆ. ಹತ್ತಕ್ಕೆ ಹತ್ತೂ ಜನ ಸರಿಯಾಗಿ ೯೦% ಇರುವ ಅಭ್ಯರ್ಥಿಗಳು ಅಂದುಕೊಳ್ಳೋಣ, ಇವರಲ್ಲಿ ಆಯ್ಕೆ ಮಾಡಬೇಕೆಂದರೆ ಒಂದು ಸುತ್ತಿನ ಪರಿಷ್ಕರಣೆ ಆದಾಗ  ಯಾರಿಗೆ ಹೆಚ್ಚಿನ ನಿಪುಣತೆ(ಸ್ಕಿಲ್ಲ್ ಸೆಟ್) ಇದೆ ಅಂತ ನೊಡುತ್ತಾರೆ ಅದರಲ್ಲಿ   ಸಿ - ೪ ಜನ, ಸಿ,ಸಿ++ -೩ ಜನ, ಸಿ,ಸಿ++,ಜಾವ - ೩ ಜನ ತಿಳಿದವರಾಗಿದ್ದರೆ ನಿಮ್ಮ ಊಹೆಯ ಪ್ರಕಾರ ಯಾರನ್ನು ಕರೆಯಬಹುದು?? ಇಂಟರ್ವ್ಯೂವ್ ಮಾಡುವವರು ಅವರ ಕೆಲಸ ಸುಲಭ ಮಾಡಿಕೊಳ್ಳಲು ನೋಡುತ್ತಾರೆಯೊ ಹೊರತು ಮೊದಲಿಗೇನೆ ನಿಮ್ಮ ಜ್ಞಾನವನ್ನು ಓರೆಗೆ ಹಚ್ಚಿ ಆಯ್ಕೆ ಮಾಡಲು ನಿಂತಿರುವುದಿಲ್ಲ. ಹಾಗಾಗಿ ಕೊನೆಗೆ ಸಿ,ಸಿ++,ಜಾವ ತಿಳಿದ ೩ ಜನ ಆಯ್ಕೆ ಆಗುತ್ತಾರೆ ಅಲ್ಲಿಗೆ ೯೦% ತೆಗೆದು ಸಿ,ಸಿ++ ತಿಳಿದ ಸುಮಾರು ೭ ಜನರ ಅವಕಾಶ ತಪ್ಪಿತಲ್ಲವಾ? ಅವರಿಗೆ ನಿಜವಾಗಲು ಎಷ್ಟು ಟ್ಯಾಲೆಂಟ್ ಇದ್ದರೆ ಏನು ಪ್ರಯೊಜನವಾದಂತಾಯಿತು? ಇನ್ನು ಆಯ್ಕೆ ಆದ  ೩ ಜನರಲ್ಲಿ ಯಾರು ಎಂತಹ ಪ್ರಾಜೆಕ್ಟ್ ಮಾಡಿದ್ದಾರೆ ಎನ್ನುವುದನ್ನು ನೋಡಿ ಪರಿಷ್ಕರಣೆ  ಮಾಡಿ ಒಬ್ಬನ್ನ(ಳ)ನ್ನು ರಿಜೆಕ್ಟ್ ಮಾಡಿದರೆ, ಒಳ್ಳೆಯ ಸಂಸ್ಥೆಯಲ್ಲಿ ಸಾವಿರಾರುಗಟ್ಟಲೆ ದುಡ್ಡುಕೊಟ್ಟು ಕೋರ್ಸ್
ಮಾಡಿ ಕಳಪೆ ಪ್ರಾಜೆಕ್ಟ್ ಮಾಡಿದರೆ ಏನು ಬಂತು ಪ್ರಯೋಜನ? ಕೊನೆಗೂ ಅವಕಾಶ ತಪ್ಪಿತಲ್ಲವಾ? ಇನ್ನು ಕೊನೆಯ ಸುತ್ತಿಗೆ ಆಯ್ಕೆಯಾದ ಇಬ್ಬರಲ್ಲಿ ಒಂದೆ ಸಮನಾದ ಜ್ಞಾನವಿದ್ದರೆ ಅವರು ಇಂಟರ್ವ್ಯೂವ್ ಅಲ್ಲಿ ಹೇಗೆ ಉತ್ತರಿಸಿದರು ಯಾವ ರೀತಿಯ ಜಾಣ್ಮೆಯಿಂದ ಉದಾಹರಣೆ ಕೊಟ್ಟು ಉತ್ತರಿಸಿದರು ಅನ್ನುವುದರ ಮೇಲೆ ಹೋಗುತ್ತದೆ.

ಮೇಲಿನ ಉದಾಹರಣೆ ಕೇವಲ ನನ್ನ ಉತ್ಪ್ರೇಕ್ಷೆ ಅಷ್ಟೆ ಆದರೆ ಅಷ್ಟೆ ಸಾಧ್ಯವು ಸಹ ಇದೆ. ಯೋಚಿಸಿ ೧೦ ಹುದ್ದೆಗೆ ೫೦೦ ಫ್ರೆಷರ್ ಅರ್ಜಿಗಳು ಬಂದರೆ ಈ ರೀತಿಯಾಗಿ ಪರಿಷ್ಕರಿಸುವುದಿಲ್ಲ ಅಂತ ಯಾವ ಗ್ಯಾರಂಟಿ ಇದೆ?    
    ಕೆಲಸ ಹೇಗೆ ಗಿಟ್ಟಿಸುತ್ತೀರಾ ಎನ್ನುವುದು ಮುಖ್ಯವಲ್ಲ!! ನಿಮ್ಮಲ್ಲಿ "stuff" ಇರಬೇಕು, ಆಗಲೆ ನಿಮಗೆ ಮರ್ಯಾದೆ ಇಲ್ಲವಾದರೆ ನಾಯಿಯ ಕುನ್ನಿ ತರಹ ನಿಮ್ಮ ಬಾಳಾಗುತ್ತದೆ. ಎಲ್ಲ ಕಂಪನಿಗಳಲ್ಲೂ ಕಿತ್ತು ತಿನ್ನುವಂತಹ ತೋಳಗಳಿರುತ್ತವೆ ಅವುಗಳ ಜೊತೆ ಹೊಂದಿಕೊಂಡು (ಹೊಂದಿಕೊಳ್ಳದೆ ವಿಧಿಯಿಲ್ಲ) ಮರ್ಯಾದೆ ಗಿಟ್ಟಿಸಬೇಕೆಂದರೆ ಕುನ್ನಿಯ ತರಹ ಬದುಕಲು ಸಾಧವಿಲ್ಲ.
ತೋಳಗಳನ್ನು ಹೆದರಿಸುವಂತಹ ಸಿಂಹವಾಗಬೇಕು, ಸಿಂಹವಾಗಬೇಕು ಅಂದರೆ ನಮ್ಮ ಹತ್ತಿರ ಅತೀ ಸೂಕ್ಷ್ಮ ವಿಚಾರಗಳ ಮಟ್ಟಿಗೆ ಸಹ ಜ್ಞಾನವಿರಬೇಕು. ಇಲ್ಲವೆಂದರೆ ಕನಿಷ್ತ "ಗಾಡ್ಸ್ ಮಸ್ಟ್ ಬಿ ಕ್ರೆಝಿ" ಎಂಬ ಚಿತ್ರದಲ್ಲಿ ಪುಟ್ಟ ಹುಡುಗ ತೋಳಕ್ಕಿಂತ ಎತ್ತರವಿರುವಂತೆ ಭಾವನೆ ಬರಿಸಲು ಮರದ ಚಕ್ಕೆ ತಲೆಮೆಲೆ ಹಿಡಿದು ತೋಳ ಹೆದರಲು ಭಾವನೆ ಮೂಡಿಸುವಂತೆ ನೀವು ಸಹ ನಿಮ್ಮ ಹತ್ತಿರ ಜ್ಞಾನವಿದೆಯೆಂಬಂತೆ ಕನಿಷ್ಟ ಬಿಲ್ಡ್‌ಅಪ್ ಆದ್ರು ಕೊಡಬೇಕು. ಎರಡನೆ ದಾರಿಗೆ ಹೋಲಿಸಿದರೆ ಮೊದಲನೆ ದಾರಿಯೆ ಸುಲಭ ಹಾಗು ಸರಿಯಾದುದು.

 ಈ ಮೂರನೆಯ ಸಾಧನವೆ ಜ್ಞಾನ, ಈಗ ಎಲ್ಲವನ್ನು ಕೂಡಿಸಿದರೆ ನಮ್ಮ ಹತ್ತಿರ ವಿನಮ್ರ ಭಾವನೆ ಇದೆ,ಒಳ್ಳೆಯ ವೃತ್ತಿಯ ಜಾತಕವಿದೆ,ಅಗತ್ಯ ಜ್ಞಾನವಿದೆ. ಇಷ್ಟಿದ್ದ ಮಾತ್ರಕ್ಕೆ ನಿಮಗೆ ಕೆಲಸ ಸಿಗುವ ಹಾಗಿದ್ದರೆ ನೀವು ಈ ಬ್ಲಾಗ್ ಪೋಸ್ಟ್ ಆನು ಇಲ್ಲಿಯವರೆಗು ಮಾರ್ಗದರ್ಶನಕ್ಕಾಗಿ ಓದಿಕೊಂಡು ಬರುತ್ತಲೆ ಇರಲಿಲ್ಲ ಅಲ್ವಾ? ಹಾಗಾದರೆ ಇನ್ನು ಚರ್ಚೆ ಮಾಡದಿರೊ ಅದು ಯಾವ ಸಾಧನ ಬೇಕು ನಿಮಗೆ ಕೆಲಸ ಖಂಡಿತವಾಗಿಯು ಸಿಗಲೆ ಬೇಕು ಅನ್ನೊಕ್ಕೆ?

ಮುಂದುವರೆಯುವುದು..

--ಪ್ರಸಾದ್

Tuesday, November 5, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೧


ಲಿಂಕ್ಡ್-ಇನ್.ಕಾಂ
ಹಲವರು ಕೇಳಿರ್ತೀರಾ,ಕೆಲವರು ಸೇರಿರ್ತೀರಾ.
ಕೇಳಿದ್ರು ಆಸಕ್ತಿ ತೋರ್ಸಿರಲ್ಲ,ಸೇರಿದ್ರು ಅದನ್ನ ಸಂಪೂರ್ಣವಾಗಿ ಉಪಯೋಗಿಸಿರಲ್ಲ!!
ಒಟ್ನಲ್ಲಿ ನಂ ಕನ್ನಡಿಗರು ಉದ್ಧಾರ ಆಗ್ತಿಲ್ಲ :( (on an average)

 ಹೆಚ್ಚಾಗಿ ನಮ್ಮ ಕನ್ನಡಿಗರ ಬಾಳು ಹೀಗೆ ಆಗ್ತಿರೊದು ದುಖ:ಕರ ಸಂಗತಿ.
ಇದನ್ನ ಬದಲಿಸಬೇಕು ಅಂದರೆ ನಮಗೆ ಅನುಕೂಲಕರ ವಾತರವರಣ ಸೃಷ್ಟಿ ಆಗಬೇಕು.
ಸೃಷ್ಟಿ ಆಗಬೇಕು ಅಂದ್ರೆ ನಮಗೆ ಯಾರೊ ಮಾಡಿಕೊಡೊಕ್ಕೆ ಆಗಲ್ಲ,ಮಾಡಿಕೊಟ್ರು ಅದು ಶಾಶ್ವತ ಇರಲ್ಲ!!
ಅದಕ್ಕೆ ನಮಗೆ ತಕ್ಕ ಅನುಕೂಲಕರ ವಾತವರಣ ನಾವೆ ಸೃಷ್ಟಿ ಮಾಡಿಕೊಳ್ಳಬೇಕು, ಆಗ ಮಾತ್ರ ನಾವು ಕನ್ನಡಿಗರು ಉದ್ಧಾರ ಆಗೊಕ್ಕೆ ಸಾಧ್ಯ.
         ಒಂದು ನಟ್ ತೆಗಿಬೇಕು ಆಂದರೆ ಸ್ಕ್ರೂ ಡ್ರೈವರ್ ಅಥವಾ ಸ್ಪಾನೆರ್ ಎಂಬ ಸಾಧನ ಬೇಕೊ ಹಾಗೆ ನಮ್ಮ ವೃತ್ತಿಜೀವನ ಬದಲಾಗಬೇಕು ಅಂದರೆ ಅದಕ್ಕೆ ತಕ್ಕ ಅನುಕೂಲಕರ ಸಾಧನಗಳನ್ನು ಉಪಯೋಗಿಸಬೇಕು. ಹೀಗಿದ್ದ ಮೇಲೆ ನಮ್ಮ ವೃತ್ತಿ ಜೀವನದ ಅನುಕೂಲಕರ ಸಾಧನಗಳು ಯಾವುದಾವುದು?
 
           ಸಾಧನಗಳು ಯಾವುದು ಅಂತ ಹುಡುಕೊ ಮುಂಚೆ, "ಏನನ್ನು"ರಿಪೇರಿ ಮಾಡಲು "ಏನು"ಬೇಕು ಅನ್ನೊದೆ ಮೂಲ ಪ್ರಶ್ನೆ. ಇದು ಗೊತ್ತಾದ್ ಮೇಲೆ ಅದನ್ನ "ಹೇಗೆ"ಸಾಧಿಸುತ್ತೇವೆ ಅನ್ನೊದೆ ಯಕ್ಷ ಪ್ರಶ್ನೆ.

 "ಏನನ್ನು" ಅನ್ನೊದು ಇಲ್ಲಿ "ವೃತ್ತಿ ಜೀವನ" ಅಂತ ಪರಿಗಣಿಸಿ ಮುಂದೆ ಸಾಗೋಣ.

ಕೈಲಿ ಸರ್ಟಿಫಿಕೇಟ್ ಇದೆ,ಸಾಧಿಸಬೇಕು ಅನ್ನೊ ಹಂಬಲ ಇದೆ ಅಲ್ವಾ?
ಕೇವಲ ಹಂಬಲ/ಆಸೆ ಇದ್ರೆ ಸಾಕಾ?? ಮುಖ್ಯವಾಗಿ ಛಲ ಇರಬೇಕು. ಛಲ ಇದ್ದಾಗಲೆ "ಏನನ್ನು"ಸಾಧಿಸುವುದಕ್ಕೆ "ಏನೆಲ್ಲಾ"ಮಾಡಬೇಕೊ ಅವುಗಳ ದಾರಿ ಕಂದು ಹಿಡಿಯಲು ಪ್ರಯತ್ನಿಸುತ್ತೇವೆ. ಈ ಲೇಖನ ಓದುತ್ತಿರುವುದೆ ನಿಮ್ಮ ತುಡಿತಕ್ಕೆ ಸಾಕ್ಷಿ.

            "ವೃತ್ತಿ ಜೀವನ"ಸುಧಾರಿಸಲು ಅಥವಾ ದಾರಿಗೆ ತರಲು ನಾವು ಸದಾ ಪ್ರಯತ್ನಿಸುತ್ತಿರಬೇಕಾಗುತ್ತದೆ. ನಮ್ಮ ಆಚಾರ ವಿಚಾರಗಳನ್ನು ಸುಧಾರಿಸಬೇಕಾಗುತ್ತದೆ,ಹಳೆಯ ನೀರುನ್ನು ಹರಿಯಲು ಬಿಟ್ಟು ಹೊಸ ನೀರು ನಮ್ಮ ಆಲೊಚನಾ ಕೊಳದಲ್ಲಿ ತುಂಬಬೇಕಾಗುತ್ತದೆ. ಯಾವಾಗ ಮೌಢ್ಯ(ತಿಳುವಳಿಕೆ ಇಲ್ಲದಿರುವುದು), ಅಹಂಕಾರ ಎನ್ನುವುದು ತಲೆಯಲ್ಲಿ ತುಂಬಿರುತ್ತದೆಯೊ ಅಲ್ಲಿಯವರೆಗು ನಮ್ಮ ಜ್ಞಾನದ ಕೊಳದೊಳಗೆ ಹೊಸ ನೀರು ತುಂಬಲು ಆಗುವುದಿಲ್ಲ.
       
            ಈ ಮಾತು ಯಾಕೆ ಬಂತು ಅಂದರೆ ಕನ್ನಡಿಗರಿಗೆ ಸಹಾಯ ಆಗಲಿ ಅಂತಾನೆ ಹಲವಾರು ಕನ್ನಡಿಗರು ತಮ್ಮ ನಿತ್ಯ ಜೀವನದಲ್ಲಿ ಸಮಯವನ್ನು ಮುಡಿಪಾಗಿಟ್ಟು ಇತರ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ನೀಡುತ್ತಾರೆ. ಆದರೆ ಸಹಾಯ ಕೇಳಿ ಬಂದ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ಸಿಕ್ಕ ಮೇಲೆ ಧನ್ಯವಾದ ತಿಳಿಸಬೇಕೆಂಬ ಕನಿಷ್ಟ ಸೌಜನ್ಯ ಇಲ್ಲದಿರುವುದು ಅವರವರ ದುಸ್ಥಿತಿಗೆ ಕಾರಣ.ಮಾರ್ಗದರ್ಶಕರ ಉತ್ಸಾಹವನ್ನು ಬೇಕಾಬಿಟ್ಟಿಯಾಗಿ ತಿಳಿಯುವರಿಗೆ ಮತ್ತೊಮ್ಮೆ ಸಹಾಯ ಮಾಡಲು ಯಾರು ಬರುತ್ತಾರೆ? ಇದರಿಂದ ಇತರರಿಗೂ ನಷ್ಟವಾಗುತ್ತದೆ. ವಿನಮ್ರತೆ/ಸೌಜನ್ಯತೆ ಅನ್ನುವುದು ಕಲಿಯಲು ಇತರರೊಂದಿಗೆ ಬೆರೆಯಲು ಬೇಕಾಗಿರುವಂತಹ ಅತ್ಯಂತ ಮುಖ್ಯವಾದ ಸಾಧನ. ಈ ಮೊದಲ ಸಾಧನ ಇಟ್ಟುಕೊಂಡರೆ ನೀವು ಸಹಾಯ ಯಾಚಿಸಿದಾಗಲೆಲ್ಲ ಸಹಾಯ ಸಿಗುತ್ತದೆ.

                 ನೀವು ವಿನಮ್ರ ಭಾವದ ಕನ್ನಡಿಗರು ಅನ್ನುವ ಏಕೈಕ ಕಾರಣಕ್ಕೆ ನಿಮಗೆ ಕೆಲಸ ಕೊಡಲು ಆಗುತ್ತದೆಯೆ? ಸಾಧ್ಯವಿಲ್ಲ!! ಹಾಗಾಗಿ ನಿಮಗೆ ಬೇಕಾಗಿರುವ ಎರಡನೆಯ ಸಾಧನ ನಿಮ್ಮ ಗುರಿ,ಜ್ಞಾನ,ಜಾಣ್ಮೆ,ಸಾಧನೆಗಳನ್ನು ಪ್ರತಿಬಿಂಬಿಸುವ ರೆಸ್ಯುಮೆ/ವೃತ್ತಿ ಜಾತಕ(curriculum vitae) ಅಗತ್ಯ.ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮುಂಚೆ ಬರೆದಿದ್ದೇನೆ.

             ವೃತ್ತಿ ಜಾತಕವು ನಿಮ್ಮ ಪ್ರತಿಬಿಂಬವೆಂದೆ ತಿಳಿಯಿರಿ, ಎಲ್ಲಾ ಕಡೆಯಲ್ಲಿ ನೀವಿದ್ದುಕೊಂಡು ನಿಮ್ಮ ಗುಣಗಾನ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿಯೆ ನಿಮ್ಮ ಪರವಾಗಿ ನಿಮ್ಮ ಜಾಣ್ಮೆ,ಸಾಧನೆಯ ಬಗ್ಗೆ ನಿಮ್ಮ ವೃತ್ತಿ ಜಾತಕವು ಮಾತಾಡಬೇಕು. ವೃತ್ತಿ ಜಾತಕವನ್ನು ಹಗುರವಾಗಿ ಪರಿಗಣಿಸಿದರೆ ನಿಮ್ಮನ್ನು ಸಹ HR ಅಷ್ಟೆ ಹಗುರಾಗಿ ಪರಿಗಣಿಸಿ ನಿಮ್ಮನ್ನು ಅವಕಾಶವಂಚಿತರಾಗುವಂತೆ ಮಾಡಬಹುದು.
ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮತ್ತೊಮ್ಮೆ ಓದಿ ಇಲ್ಲಿಂದ ಮುಂದೆ ಓದಿರಿ.

              ಈಗ ಎರಡನೆಯ ಸಾಧನವನ್ನು ನೀವು ನಿಮ್ಮ ಬತ್ತಳಿಕೆಯಲ್ಲಿ ಇಟ್ಟಿಕೊಂಡಿರಲ್ಲವೆ?
ನೀವು ಈಗ ವಿನಮ್ರಭಾವದ + ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಾಯಿತಲ್ಲವೆ ಇಷ್ಟಕ್ಕೆ ನಿಮಗೆ ಕೆಲಸ ಸಿಗುತ್ತದೆಯೆ? ಯೋಚಿಸಿ

ಉಹು, ದೇವರು ವರ ಕೊಟ್ಟರು ಪೂಜಾರಿ ವರ ಕೊಡಲ್ಲ ಎನ್ನುವ ಹಾಗೆ ಆಗಬಾರದು ಹಾಗಿದ್ದರೆ ಏನು ಮಾಡಬಹುದು?

ಯೋಚಿಸಿ, ನನ್ನೊಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ

--ಪ್ರಸಾದ್
 (ಮುಂದುವರೆಯುವುದು..)  

Thursday, August 11, 2011

ದೇಶದ್ರೋಹಿ ನಾಡದ್ರೋಹಿ - ಹೋಲಿಕೆ


ಭಾರತದಲ್ಲಿ ಹುಟ್ಟಿ ಬೆಳೆದು ಪರದೇಶಕ್ಕೆ ಅಭಿಮಾನವನ್ನು ತೋರಿಸುವ ವ್ಯಕ್ತಿ ಹೇಗೆ ದೇಶದ್ರೋಹಿ ಎನಿಸಿಕೊಳ್ಳುತ್ತಾನೊ

ಹಾಗೆಯೆ

ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು ಮಾತೃ ಭಾಷೆ ಯಾವುದಿದ್ದರೂ ನಾಡಿನ ಭಾಷೆಯಾದ ಕನ್ನಡದ ಬಗ್ಗೆ ಅಭಿಮಾನವಿಲ್ಲದಿದ್ದರೆ ಆ ವ್ಯಕ್ತಿ ನಾಡದ್ರೋಹಿ ಆಗುವನು. ಹೌದಾ.. ಇಲ್ವಾ??? ಯೋಚಿಸಿ....

ಗ್ರಾಹಕ ಸೇವೆಯವರ ಜೊತೆ ಕನ್ನಡದಲ್ಲಿ ಮಾತನಾಡದವನು ನಾಡದ್ರೋಹಿ.

ಕನ್ನಡದ ಒಳ್ಳೆಯ ಹಾಡುಗಳನ್ನು ಕೇಳದವನು ನಾಡದ್ರೋಹಿ(ಹಾಡು ಕೇಳಲು ಇಷ್ಟಪಡದವರನ್ನು ಹೊರತುಪಡಿಸಿ)

ಕನ್ನಡದ ಒಳ್ಳೆಯ ಚಿತ್ರಗಳನ್ನು ನೋಡದವನು ನಾಡದ್ರೋಹಿ(ಚಿತ್ರ ನೋಡಲು ಇಷ್ಟಪಡದವರನ್ನು ಹೊರತುಪಡಿಸಿ)

ಕನ್ನಡಿಗರ ಜೊತೆ ಕನ್ನಡದಲಿ ಮಾತನಾಡದವನು ನಾಡದ್ರೋಹಿ.(ಮಾತು ಆಡಲು ಇಷ್ಟಪಡದವರನ್ನು ಹೊರತುಪಡಿಸಿ)

ಕನ್ನಡದ ಸಾಹಿತ್ಯವನ್ನು ಓದದವನು ನಾಡದ್ರೋಹಿ.(ಯಾವುದೆ ಭಾಷೆಯ ಸಾಹಿತ್ಯ ಇಷ್ಟಪಡದವರನ್ನು ಹೊರತುಪಡಿಸಿ)

ತನ್ನ ಸುತ್ತ ಕನ್ನಡದ ವಾತಾವರಣ ಸೃಷ್ಟಿಸದವನು ನಾಡದ್ರೋಹಿ. (ಯಾವುದೆ ಭಾಷೆಯ ವಾತಾವರಣ ಇಷ್ಟಪಡದವರನ್ನು ಹೊರತುಪಡಿಸಿ)

ಎಲ್ಲಕಿಂತಲೂ ಮಿಗಿಲಾಗಿ ಕನ್ನಡಕ್ಕೆ ಆದ್ಯತೆ ಕೊಡದವನು ನಾಡದ್ರೋಹಿ.

Wednesday, February 23, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೫

ರೆಸ್ಯುಮೆಯಲ್ಲಿ ಕೊನೆಯದಾಗಿ ಉಳಿಯುವುದು ಪರ್ಸನಲ್  ಡಿಟೇಲ್ ಹಾಗು ಡಿಕ್ಲೆರೇಷನ್

ಪರ್ಸನಲ್  ಡಿಟೇಲ್ ಸಹ ಕಡೆಗಣಿಸಲಾಗದ ಒಂದು ಮುಖ್ಯ ವಿಭಾಗ ಯಾಕೆಂದರೆ ಈ ವಿಭಾಗದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ!! ನಿಮ್ಮ ಗುರಿ, ಶೈಕ್ಷಣಿಕ ವಿಭಾಗ, ಕೆಲಸ, ಅನುಭವ, ಸ್ಕಿಲ್ಸ್ ಎಲ್ಲಾ ಸರಿಯಿದ್ದು ವೈಯಕ್ತಿಕವಾಗಿ ನಿಮ್ಮ ನಡೆ ನುಡಿ ಸರಿ ಕಾಣಲಿಲ್ಲವೆಂದರೆ ಯಾರು ಯಾಕೆ ತೊಗೊತಾರೆ? ನಿಮ್ಮ ವ್ಯಕ್ತಿತ್ವ ನೀವು ಕೆಲಸ ನಿರ್ವಹಿಸುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ರೆಸ್ಯುಮೆ ನೋಡುವವರು ಪರ್ಸನಲ್  ಡಿಟೇಲ್ ವಿಭಾಗದಲ್ಲಿ ಹೆಚ್ಚಿನ ಮಹತ್ವ ನೀಡದಿದ್ದರೂ ಸಹ ಅಲ್ಲಿ ನೀವು ತಿಳಿಸುವ ಮಾಹಿತಿ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಿಮ್ಮ ವ್ಯಕ್ತಿತ್ವ ಒಳ್ಳೆಯದು ಎನ್ನುವ ಭಾವ ಮೂಡಿದರೆ ಈ ವಿಭಾಗ ಇರುವುದು ಸಾರ್ಥಕವಾಗುತ್ತದೆ.
         ಈ ವಿಭಾಗದ ಉದ್ದೇಶ ಅರ್ಥವಾದ ಮೇಲೆ ಇಲ್ಲಿ ತಿಳಿಸುವ ಅಥವಾ ತಿಳಿಸಬೇಕಾದ ವಿಚಾರ ಯಾವುದು ಎಂದು ನೋಡಿದಾಗ ಕಾಣುವುದು

ಅ.ಹುಟ್ಟಿದ ದಿನಾಂಕ ಹಾಗು ವರ್ಷ / ವಯಸ್ಸು - ಇದು ಇರುವುದು ಅಭ್ಯರ್ಥಿಯ ವಯಸ್ಸು ತಿಳಿದುಕೊಳ್ಳುವುದಕ್ಕೆ. ಕೆಲವರಿಗೆ ಅಭ್ಯರ್ಥಿ ಇಷ್ಟು ವಯಸ್ಸಿನವರಾಗಿರಬೇಕು ಎಂದು ಹುಡುಕುತ್ತಿರುತ್ತಾರೆ ಅಂತಹ ಸಮಯದಲ್ಲಿ ಇಲ್ಲಿ ತಿಳಿಸಿದರೆ ಸುಲಭವಾಗಿ ತಿಳಿಯುತ್ತದೆ.

ಆ.ಭಾಷೆ - ಎಲ್ಲಾ ಓಕೆ, ಕನ್ನಡಿಗರು ಎಂದ ಮೇಲೆ ತಮಿಳು, ತೆಲುಗು, ಹಿಂದಿ, ಮರಾಠಿ ಎಲ್ಲಾ ಯಾಕೆ?  ನೀವು ಭಾಷೆ ವಿಭಾಗದಲ್ಲಿ ಆಂಗ್ಲ, ಕನ್ನಡ ಬಿಟ್ಟು ಬೇರೆ ಯಾವ ಭಾರತೀಯ ಭಾಷೆ ಹಾಕಿಕೊಂಡರು ನಿಮಗೆ ಕೆಲಸ ಸಿಗುವುದಕ್ಕೆ ಸಹಾಯಕವಾಗುವುದಿಲ್ಲ!! ಆದರೆ ಕನ್ನಡೇತರರಿಗೆ ಅವರ ಭಾಷೆ ಕನ್ನಡಿಗರ ನಾಲಿಗೆಯೆ ಮೇಲೆ ಹಾರಿದಾಡುತ್ತಿರುವುದರ ಬಗ್ಗೆ ಅಹಂಕಾರ ಹುಟ್ಟಿ ಕನ್ನಡಕ್ಕೆ ಅಪಮಾನ ಮಾಡುವ ಸಾಧ್ಯತೆ ಇದೆ. ಅವರು ನಮ್ಮ ಭಾಷೆ ಕಲಿಯುವುದಿಲ್ಲ ಆದರೆ ನಾವು ಅವರ ಭಾಷೆ ಕಲಿತು ಅವರು ಕನ್ನಡಿಗರಾಗದೆ ಇರುವ ತಡೆ ಗೋಡೆಯಂತಾಗುತ್ತೇವೆ.
          ಹುಟ್ಟಿರುವುದು ಕರ್ನಾಟಕದಲ್ಲಿ, ನೆಲೆಸಿರುವುದು ಕರ್ನಾಟಕದಲ್ಲಿ, ಹೊಟ್ಟೆಪಾಡು ಎಲ್ಲವು ಕರ್ನಾಟಕದ್ದು ಅಂದ ಮೇಲೆ ಮಾತೃಭಾಷೆ ಯಾವುದೆ ಆಗಿದ್ದರು ಸಹ ಅವರು ಕನ್ನಡಿಗರೆ ಆಗುತ್ತಾರೆ ಅಲ್ಲವೆ? ಮಾತೃಭಾಷೆ ಎನ್ನುವ ಒಂದೆ ಆಧಾರದ ಮೇಲೆ ಕನ್ನಡಿಗರೆ, ಕನ್ನಡಿಗರೇತರು ಅಂತಾ ವಿಂಗಡಿಸಿದರೆ ಅವರು ಎಂದಿಗೂ ಕನ್ನಡದವರಾಗ್ಲು ಸಾಧ್ಯವೇ ಇಲ್ಲ. ಆ ರೀತಿ ಎಣಿಸಿದರೆ ಡಿವಿಜಿ,ಬೇಂದ್ರೆ,ಮಾಸ್ತಿ,ಕೈಲಾಸಂ ಅವರನ್ನೆಲ್ಲಾ ಕನ್ನಡಿಗರೆನ್ನುವುದಕ್ಕೆ ಆಗುವುದೆ ಇಲ್ಲ!! ಆ ರೀತಿ ಆದರೆ ತಪ್ಪು ಅಲ್ವ? ಮಾತೃ ಭಾಷೆ ಯಾವುದೆ ಇರಲಿ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಅಭಿಮಾನವಿರುವ ಪ್ರತಿಯೊಬ್ಬರು ಸಹ ಕನ್ನಡಿಗರೆ ಆಗುತ್ತಾರೆ. ಯಾವ ಭಾಷೆ ಕಲಿಯುವುದು ತಪ್ಪಲ್ಲ ಆದರೆ ಇಲ್ಲಿ ನೆಲಸಿದವರಿಗೆ ಕನ್ನಡ ಕಲಿಸದೆ ಅನಗತ್ಯ ಭಾಷ್ಯಾ ಪಾಂಡಿತ್ಯ ಪ್ರದರ್ಶಿಸುವುದಕ್ಕೆ ನಮ್ಮ ಪ್ರಾಡಕ್ಟ್ ಆದ ಕನ್ನಡ ಮರೆತು ಇತರರ ಭಾಷೆಯಲ್ಲೆ ಮಾತಾಡಿ ಸರ್ವೀಸ್ ಕೊಟ್ಟರೆ ಅವರು ಯಜಮಾನರಂತೆ ನಾವು ಸೇವಕರಂತೆ ನಡೆದುಕೊಂಡ ರೀತಿ ತಾನೆ?
      ನಮ್ಮನ್ನು ನಮ್ಮ ಕನ್ನಡವನ್ನು ಬಲಹೀನವೆಂದು ಗೇಲಿ ಮಾಡದೆ ಇರುತ್ತಾರೆಯೆ? ಕನ್ನಡಿಗರ ನಾಲಿಗೆಯಲ್ಲೆ ಕನ್ನಡವಿರದೆ
ಬೇರ್ಯಾವುದೊ ಇದ್ದರೆ ಕನ್ನಡವೇ ಬಲಹೀನ ಎಂದು ವ್ಯಂಗವಾಡುತ್ತಾರೆ. ಈ ಸೂಕ್ಷ್ಮಗಳೆಲ್ಲವು ಕಂಪನಿಯ ಒಳಗೆ ಕಾಲಿಟ್ಟ ತಕ್ಷಣ ಕಾಣುತ್ತದೆ, ಈಗಲೆ ಎಚ್ಚೆತ್ತುಕೊಂಡರೆ ನಮ್ಮ ಮಾನ ಉಳಿಸಿಕೊಂಡಂತೆ, ಕನ್ನಡವನ್ನು ಹಾಗು ಕನ್ನಡತನವನ್ನು ಎತ್ತಿಹಿಡಿದಂತೆ.
   
>>>>> ೨೦೧೧ ಜನಗಣತಿ ಆರಂಭವಾಗಿದೆ. ಜನಗಣತಿಯ ವೇಳೆ ಮಾತೃಭಾಷೆಯನ್ನು ಬರೆಸಿಕೊಳ್ಳುತ್ತಾರೆ. ನಿಮ್ಮ ಮನೆಯಲ್ಲಿ ಯಾವುದೇ ಭಾಷೆ ಮಾತನಾಡುತ್ತಿದ್ದರೂ ದಯವಿಟ್ಟು "ಕನ್ನಡ"ಮತ್ತು ಇತರೆ ಭಾಷೆಯಲ್ಲಿ "ಇಂಗ್ಲಿಷ್" ಮಾತ್ರ ಎಂದು ಕಡ್ಡಾಯವಾಗಿ ಬರೆಸಿ. ಒಂದು ವೇಳೆ ನೀವು ಮನೆಯಲ್ಲಿ ಇಲ್ಲದ್ದಿದ್ದರೆ, ನಿಮ್ಮ ತಂದೆ ಅಥವಾ ತಾಯಿಗೆ "ಕನ್ನಡ" ಇತರೆ ಭಾಷೆಯಲ್ಲಿ "ಇಂಗ್ಲಿಷ್" ಎಂದು ಬರೆಸಲು ಹೇಳಿ. ಇದು ಏಕೆ ಮುಖ್ಯ ಎಂದರೆ, ಬೆಂಗಳೂರಿನಲ್ಲಿ ಕೇವಲ ೩೦ ರಷ್ಟು ಕನ್ನಡಿಗರು ಇರೋದು ಅದು ಇದು ಅಂತ ತಪ್ಪಾದ ಮಾಹಿತಿ ಕೊಟ್ಟು ಕನ್ನಡಕ್ಕೆ ಸಿಗಬೇಕಾದ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ ಇದರ ಮೇಲೆ ಕನ್ನಡ ಮೆರೆಯಬೇಕಾದ ಜಾಗದಲ್ಲೆಲ್ಲಾ ಹಿಂದಿ ಹೇರುತ್ತಾರೆ!! ಇಲ್ಲಿ ಹುಟ್ಟಿ ಇಲ್ಲೆ ಬೆಳೆದ ಮೇಲೆ ನೀವು ಕನ್ನಡಿಗರು ತಾನೆ? ಮಾತೃ ಭಾಷೆ ಯಾವುದಿದ್ದರೇನು ಮೆರೆಯಬೇಕಾದ್ದು ಕರ್ನಾಟಕದ ಭಾಷೆ ಅಲ್ಲವೆ? ನೀವು ಮನೆಯಲ್ಲಿ ಉರ್ದು, ತೆಲುಗು, ತಮಿಳು, ಹೀಗೆ ಯಾವುದೇ ಭಾಷೆಯನ್ನು ಮಾತಾಡುತ್ತಿದ್ದರೂ "ಕನ್ನಡ" ಎಂದೆ ಹೇಳಿ. ಈ ಸಂದೇಶವನ್ನು ಎಲ್ಲಾ ಕಡೆ (facebook, twitter, orkut, gtalk message)  ಹಬ್ಬಿಸಿ ಭಾಷೆಯ ಬೆಳವಣಿಗೆಗೆ ಕಾರಣರಾಗಿ. 'ನಿಮಗೆ ಗೊತ್ತಿರುವ ಇತರ ಭಾಷೆಗಳು' ಎಂಬ ಕಡೆ 'ಹಿಂದಿ'ಎಂದು ಕಡ್ಡಾಯವಾಗಿ ಬರೆಸಬೇಡಿ ಕೇವಲ ಇಂಗ್ಲಿಷ್ ಎಂದು ಮಾತ್ರ ತಿಳಿಸಿ. ಇದರಿಂದ ಬಹಳ ಜನರು ಕರ್ನಾಟಕದಲ್ಲಿ ಹಿಂದಿ ಬಳಸುತ್ತಾರೆ ಎಂಬ ತಪ್ಪು ಮಾಹಿತಿ  ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಮತ್ತು ಇದು ವಿವಿಧ ಯೋಜನೆಗಳು ಉದ್ಯೋಗ, ಸ್ಪರ್ಧಾತ್ಮಕ  ಪರೀಕ್ಷೆಗಳು, ಜಾಹೀರಾತುಗಳು ಮುಂತಾದ ಕಡೆ ಹಲವು ರೀತಿಯಲ್ಲಿ ಕನ್ನಡವನ್ನು ಕನ್ನಡಿಗರನ್ನು ಕಡೆಗಣಿಸಿ ಹಿಂದಿಯನ್ನು ಕರ್ನಾಟಕದಲ್ಲಿ ಹೇರಲು ದಾರಿಮಾಡಿಕೊಟ್ಟಂತಾಗುತ್ತದೆ.<<<<<<

     ನೀವು ಕಲಿಯಬೇಕಾದ ಭಾಷೆ ಜರ್ಮನ್, ಜಪಾನೀಸ್, ಸ್ಪ್ಯಾನಿಷ್, ಫ್ರೆಂಚ್.. ಇಂಥವನ್ನು ಕಲಿತರೆ ಕನಿಷ್ಟ ಉದ್ಯೋಗ ದೊರೆಯುವುದಕ್ಕಾದರು ಸಹಾಯವಾಗುತ್ತದೆ. ೩-೬ ತಿಂಗಳ ಸರ್ಟಿಫಿಕೇಷನ್ ಕೋರ್ಸ್ ಮಾಡಿಕೊಂಡು ಹಾಕಿಕೊಂಡರೆ ಅತೀ ಬೇಡಿಕೆಯಿರುವ ಬೈ-ಲಿಂಗುಯಲ್ ಸಾಫ್ಟ್‌ವೇರ್ ಇಂಜಿನೀಯರ್ / ಟ್ರಾನ್ಸ್‌ಲೇಟರ್ / ಫ್ರೀಲಾನ್ಸ್ ಇಂಗ್ಲಿಷ್ ಟು ಜರ್ಮನ್ / ಜಪಾನೀಸ್ / ಸ್ಪ್ಯಾನಿಷ್ / ಫ್ರೆಂಚ್ ಪ್ರಾಜೆಕ್ಟ್ಸ್ ಪಾರ್ಟ್ ಟೈಮ್ ಕೆಲಸ ಮಾಡಬಹುದು, ಮನೆಯಲ್ಲೆ ಇದ್ದು ಕೈ ತುಂಬಾ ಸಂಪಾದಿಸಬಹುದು!!

ನಿಮ್ಮನ್ನು/ನಿಮ್ಮ ರೆಸ್ಯುಮೆಯನ್ನು ಗಮನದಲ್ಲಿಟ್ಟುಕೊಳ್ಳಲು ಇಂತಹ ಭಾಷೆ ಸಹಕಾರಿ.
  
ಆ.ಹವ್ಯಾಸಗಳು ಹಾಗು ಆಸಕ್ತಿಗಳು - ಇವು ನಿಮ್ಮಲ್ಲಿಯ "ಟೀಮ್ ಸ್ಪಿರಿಟ್", "ಲಾಜಿಕಲ್ ಥಿಂಕಿಂಗ್", "ಕ್ರಿಯೆಟಿವಿಟಿ", "ಕಾಂಪಿಟೆಟಿವ್ನೆಸ್", "ಲರ್ನಿಂಗ್ ಅಟೀಟ್ಯುಡ್".. ಇಂಥವನ್ನು ಗುರುತಿಸಲು ಸಹಾಯಕವಾಗುವುದು. ಇಷ್ಟೆಲ್ಲಾ ಯಾಕೆ ಬೇಕು ಅಂದರೆ, ಒಂದು ಕಂಪನಿ ಅಂದಮೇಲೆ ನಾವು ಹಲವರೊಡನೆ ಕೂಡಿ ಒಂದು ನಿರ್ದಿಷ್ಟ ಯೋಜನೆ ಮೇಲೆ ಕೆಲಸ ಮಾಡಬೇಕಾಗುತ್ತದೆ. ಮನೆ ಸದಸ್ಯರ ಅಭಿಪ್ರಾಯಗಳು, ಕಾರ್ಯ ವೈಖರಿ, ಜೀವನ ಶೈಲಿ ಬೇರೆ ಬೇರೆ ತೆರನಾಗಿದ್ದರು ಸಹ ಒಂದಾಗಿ ಬಾಳುವಂತೆ ತಂಡದಲ್ಲಿರುವವರ ಅಭಿಪ್ರಾಯಗಳು, ಕಾರ್ಯ ವೈಖರಿಗಳೂ ಸಹ ಭಿನ್ನವಿರುತ್ತವೆ ಅಂತಹ ಪರಿಸ್ಥಿತಿಯಲ್ಲಿ ಸಹ ಹೊಂದಿಕೊಂಡು ಕೆಲಸ ಮಾಡಬಲ್ಲೆ ಎಂಬಂತೆ ಬಿಂಬಿಸಿಕೊಳ್ಳಬೇಕು ಪ್ಲೇಯಿಂಗ್ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಖೊ ಖೊ.. ತಂಡಕೂಡಿ ಆಡುವ ಮುಂತಾದ ಆಟ ಹೆಸರಿಸಬಹುದು. ನಂತರ ಲಾಜಿಕಲ್ ಥಿಂಕಿಂಗ್ ಬಿಂಬಿಸಿಕೊಳ್ಳಲು ಸಾಲ್ವಿಂಗ್ ಪಝಲ್ಸ್, ಕ್ರಾಸ್ ವರ್ಡ್, ಚೆಸ್ ... ಮುಂತಾದವು. "ಕ್ರಿಯೆಟಿವಿಟಿಗೆ" ಸ್ಕೆಚಿಂಗ್, ಚಿತ್ರಕೆಲೆ, ಹೂ ಅಲಂಕಾರ.. "ಕಾಂಪಿಟೆಟಿವ್ನೆಸ್" ಯಾವುದಾದರು ಆಟಗಳನ್ನು ತಿಳಿಸಬಹುದು, "ಲರ್ನಿಂಗ್ ಅಟೀಟ್ಯುಡ್" ಇದಕ್ಕೆ ನೀವು ಪುಸ್ತಕ, ತಂತ್ರಜ್ಞಾನ ಸಂಬಂಧಿತ ಲೇಖನ ಓದುವುದು.. ಎಂದು ತಿಳಿಸಬಹುದು. ಯೋಗ, ಸಂಗೀತ/ ಹಾಡು ಕೇಳುವುದು ಇಂಥವನ್ನು ಸಹ ತಿಳಿಸಬಹುದು, ಹೀಗೆ ನಾಲ್ಕು ಅಥವಾ ಐದು ಅಂಶಗಳನ್ನು ತಿಳಿಸಿದರೆ ಚೆನ್ನಾಗಿರುತ್ತದೆ. ಫೇಸ್ ಬುಕ್, ಆರ್ಕುಟ್,
ಸೊಷಿಯಲ್ ವೆಬ್ ಸೈಟ್ ಗಳು ಇಲ್ಲಿ ಬರಲೇಬಾರದು..


ಕೊನೆಯದಾಗಿ ನೀವು ಡೆಕ್ಲೆರೇಷನ್ ಮಾಡುವುದರೆ ಕೈಗೆ ತೆಗೆದುಕೊಂಡ ಕೆಲಸ ಮೊದಲಿನಿಂದ ಕೊನೆಯವರೆಗು ಅಚ್ಚುಕಟ್ಟಾಗಿ ನಿರ್ವಹಿಸಿದಂತೆ ಆಗುತ್ತದೆ.
ಡೆಕ್ಲೆರೇಷನ್ ಅಲ್ಲಿ ಇರಬೇಕಾದ ಸಾಲು - ಐ ಹೆಯರ್ ಬೈ ಡಿಕ್ಲೇರ್ ದಟ್ ದಿ ಅಬವ್ ಫರ್ನಿಷೆಡ್ ಇನ್ಫಾರ್ಮೇಷನ್ ಇಸ್ ಟ್ರೂ ಟು ದಿ ಬೆಸ್ಟ್ ಆಫ್ ಮೈ ನಾಲೆಡ್ಜ್. ಈ ಅರ್ಥ ಬರುವ ಇತರೆ ಸಾಲನ್ನು ಸಹ ನೀವು ಬರೆಯಬಹುದು.

ಡೆಕ್ಲೆರೇಷನ್ ಸಾಲಿನ ಕೆಳಗೆ ಪುಟದ ಎಡಗಡೆಯಲ್ಲಿ ಸ್ಠಳ ಹಾಗು ಆ ಸಾಲಿನ ಕೆಳಗೆ ದಿನಾಂಕ ಬರೆಯಬೇಕು, ಸ್ಥಳದ ಸಾಲಿನ ಪುಟದ ಬಲಗಡೆಯ ತುದಿಯಲ್ಲಿ ನಿಮ್ಮ ಹೆಸರು ನಮೂದಿಸಿ ಅಲ್ಲಿ ಸಹಿ ಮಾಡುವಷ್ಟು ಜಾಗ ಬಿಟ್ಟಿರಬೇಕು,  

ಇಲ್ಲಿಗೆ ರೆಸ್ಯುಮೆ ಸಿದ್ಧಪಡಿಸುವುದರ ಸಂಬಂಧಿತ ವಿಚಾರ ಆಯಿತು ಆದರೆ ಇಷ್ಟಕ್ಕೆ ಎಲ್ಲವು ಮುಗಿದಂತಲ್ಲ, ಒಂದು ಮೈಲಿಗಲ್ಲು ತಲುಪಿದಂತಷ್ಟೆ. ನೀವು ಈ ರೀತಿಯ ಒಂದು ಸರಳವಾಗಿ ಕಾಣುವಂತಹ, ಅಚ್ಚುಕಟ್ಟಾಗಿ ವಿಂಗಡಿಸಿದ ಹಾಗು "ಉಪಯುಕ್ತ" ಮಾಹಿತಿಯುಕ್ತವಾದ ವಿಭಾಗಗಳಿರುವ ರೆಸ್ಯುಮೆ ತಯಾರು ಮಾಡಿ ಕಳಿಸಿ ಅದು ಶಾರ್ಟ್ ಲಿಸ್ಟ್ ಆಗಿ ನಿಮಗೆ ರಿಟನ್ ಟೆಸ್ಟ್ ಕರೆ ಬಂದಾಗ ನಿಮಗೆ ನೀವು ತಯಾರಿ ಹೇಗೆ ತೆಗೆದುಕೊಳ್ಳಬಹುದು, ಯಾವ ಪುಸ್ತಕಗಳು ಸಹಾಯಕವಾಗಬಹುದು ಎಂದು ಮುಂದಿನ ಕಂತಿನಲ್ಲಿ ನೊಡೋಣ.

ವಿ.ಸೂ: ಜನಗಣತಿಯಲ್ಲಿ, ತಿಳಿದಿರುವ ಭಾಷೆ ಕೇವಲ ಕನ್ನಡ ಹಾಗು ಇಂಗ್ಲಿಷ್ ಮಾತ್ರ ಎಂದು ಬರೆಸಲು ಮರೆಯಬೇಡಿ, ಹಿಂದಿಯಂತು ಬೇಡವೆ ಬೇಡ ಸದ್ಯಕ್ಕೆ ಅದರಿಂದಾಗುತ್ತಿರುವ ಅನ್ಯಾಯವೆ ಸಾಕು. ನೀವಿಲ್ಲದಿದ್ದರೊ ಮನೆಯವರೊಂದಿಗೂ ಸಹ ಈ ಮಾತು ತಿಳಿಸಿ. ನಿಮ್ಮ ಸ್ನೇಹಿತರೊಂದಿಗೂ ಸಹ ವಿಷಯ ಹಂಚಿಕೊಳ್ಳಿ
ಕನ್ನಡ.. ಕರ್ನಾಟಕ.. ಬೆಳಗಲಿ.. ಕನ್ನಡಿಗ ಉದ್ಧಾರವಾಗಲಿ..

ಮುಂದುವರೆಯುತ್ತದೆ...  


-- ಧನ್ಯವಾದಗಳು


Wednesday, February 9, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೪

ರೆಸ್ಯುಮೆ ಅಥವಾ ಕರಿಕ್ಯುಲಮ್ ವಿಟೇ ಎಂದರೇನು?

ನೀವು ಆಂಗ್ಲ ಪದಕೋಶದಲ್ಲಿ ಇದರ ಅರ್ಥ ಹುಡುಕಿದರೆ ನಿಮಗೆ ಸಿಗುವ ಉತ್ತರ "ನಿಮ್ಮ ಶೈಕ್ಷಣಿಕ ಹಾಗು ಕೆಲಸದ ಅನುಭವ ಮಾಹಿತಿಯ ಸಾರ". ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರೆಸ್ಯುಮೆ ಅಥವಾ ಕರಿಕ್ಯುಲಮ್ ವಿಟೇ ನಿಮ್ಮ ಸಾಧನೆಗಳ "ಸಾರ" ಅಷ್ಟೆ, ಪೂರ್ಣ ಮಾಹಿತಿ ಅಲ್ಲ. ಪೂರ್ಣ ಮಾಹಿತಿ ಬೇಕು ಅಂತ ಅವರು ಆಸಕ್ತಿ ತೋರಿದರೆ ನಿಮ್ಮನ್ನು ಖುದ್ದು ಬರಮಾಡುತ್ತಾರೆ ಅದೆ ಸಂದರ್ಶನವಾಗುತ್ತದೆ, ಹಾಗಾಗಿ ನೀವು ನಿಮ್ಮ ಶೈಕ್ಷಣಿಕ ಇತಿಹಾಸವನ್ನು ತೀರ ಕಮ್ಮಿ ಎನಿಸದ ಹಾಗೆ ಅಥವಾ ಎಲ್ಲಾ ಸಣ್ಣ ಪುಟ್ಟ ಮಾಹಿತಿಯನ್ನು ವರ್ಣಿಸದೆ, ಅವರ ಆಸಕ್ತಿ ಮೂಡಿಸುವಷ್ಟು ಮುಖ್ಯವಾದ ಅಂಶಗಳನ್ನು ತಿಳಿಸಬೇಕು.

ರೆಸ್ಯುಮೆಯನ್ನು ವಿಭಾಗಗಳಲ್ಲಿ ಬರೆಯಬೇಕು, ಅವು ಸುಮಾರು ೧೧ ವಿಭಾಗ ಆಗಬಹುದು. ಅನುಭವ ಹಾಗು  ಶಿಕ್ಷಣದ ಮೇಲೆ ಇದು ನಿರ್ಧಾರವಾಗುತ್ತದೆ. ರೆಸ್ಯುಮೆ ಸಿದ್ಧಪಡಿಸುವಾಗ ಯಾವ "ಫಾಂಟ್" ಉಪಯೋಗಿಸುತ್ತೀರ ಎಂಬುದು
ಮುಖ್ಯವಾಗುತ್ತದೆ. ವಿಂಡೋಸ್/ಲಿನ್ಕ್ಸ್ ಜೊತೆಯಲ್ಲಿಯೆ ಬಂದ "ಫಾಂಟ್" ಉಪಯೋಗಿಸುವುದೆ ಉತ್ತಮ, ಸಾಮಾನ್ಯವಾಗಿ ಏರಿಯಲ್ ಅಥವಾ ಟೈಮ್ಸ್ ನ್ಯು ರೋಮನ್ ಇವೆರಡರಲ್ಲಿ ಒಂದನ್ನು ಬಳಸುವುದು ಉತ್ತಮ. ಅಂದವಾಗಿ ಕಾಣುತ್ತದೆ ಎಂದು ಎಲ್ಲಿಯೋ ಸಿಕ್ಕ ಫಾಂಟ್ ಅನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿ(ಇನ್ಸ್‌ಟಾಲ್) ಅದನ್ನು ಬಳಸಿ ರೆಸ್ಯುಮೆ ಸಿದ್ಧಪಡಿಸಿ ಕಳಿಸಿದರೆ, ಆ "ಫಾಂಟ್" ಇಲ್ಲದ ಗಣಕದಲ್ಲಿ ರೆಸ್ಯುಮೆ ತೆರೆದರೆ ಕೇವಲ "ಜಂಕ್" ಅಕ್ಷರಗಳು ಮೂಡುತ್ತವೆ!! ನಿಮ್ಮ ರೆಸ್ಯುಮೆ ಕಸದ ಬುಟ್ಟಿಗೆ ಹೋಗುತ್ತದೆ. ಹಾಗಾಗಿ ಯಾವ "ಫಾಂಟ್" ಬಳಸುತ್ತೀರಾ ಎನ್ನುವುದು ಗಮನದಲ್ಲಿಡಬೇಕಾದ ವಿಚಾರ.
  ಇದೆ ರೀತಿಯಾಗಿ "ಫಾಂಟ್ ಅಳತೆ" ಕೂಡ ಮುಖ್ಯ್ಹ, ಬಯಲರಿಗೆ(ಹೋರ್ಡಿಂಗ್) ಅಲ್ಲಿ ಉಪಯೋಗಿಸುವ ಹಾಗೆ ದೊಡ್ಡ ದೊಡ್ಡ "ಫಾಂಟ್ ಅಳತೆ" ಬಳಸದೆ, ಕಣ್ಣಿಗೆ ಸರಿಯಾಗಿ ಕಾಣದಂತಹ ಚಿಕ್ಕ "ಫಾಂಟ್ ಅಳತೆ" ತಪ್ಪಾಗುತ್ತದೆ. ಏರಿಯಲ್ ಅಳತೆ ೯ ಸೂಕ್ತ ಎನಿಸುತ್ತದೆ, ಈ ಗಾತ್ರಕ್ಕೆ ಹೊಂದುವ "ಇತರೆ ಫಾಂಟ್" ಬಳಸಿದರೂ ಸರಿ.

ರೆಸ್ಯುಮೆಯ ವಿಭಾಗದ ತಲೆಬರಹಗಳು
>ಒಬ್ಜೆಕ್ಟಿವ್
>ಸಮ್ಮರಿ
>ಎಜ್ಯುಕೇಷನಲ್ ಕ್ವಾಲಿಫಿಕೇಷನ್
>ಕೋರ್ಸ್ ಹಾಗು ಸರ್ಟಿಫಿಕೇಷನ್‌ಗಳು
>ಟೆಕ್ನಿಕಲ್ ಸ್ಕಿಲ್
>ಇಂಟರ್ನ್‌ಷಿಪ್/ಟ್ರೈನಿಂಗ್/ಅಪ್ರೆಂಟಿಸ್
>ವರ್ಕ್ ಎಕ್ಸ್‌ಪೀರಿಯನ್ಸ್

ತಲೆಬರಹಕ್ಕೆ ಏರಿಯಲ್ ಅಳತೆ ೧೧ ಸೂಕ್ತ ಎನಿಸುತ್ತದೆ, ಈ ಗಾತ್ರಕ್ಕೆ ಹೊಂದುವ "ಇತರೆ ಫಾಂಟ್" ಬಳಸಿದರೂ ಸರಿ.
ತಲೆಬರಹ ದಪ್ಪ (ಬೋಲ್ಡ್) ಆಗಿರಬೇಕು, ಅಂಡರ್ ಲೈನ್ ಮಾಡಿರಬೇಕು.  ಪ್ರತಿ ವಿಭಾಗವೂ ಅದೆ ಪುಟದಲ್ಲಿ ಮುಗಿಯಬೇಕು, ಒಂದು ಪುಟದಲಿ ಅರ್ಧ ಮಾಹಿತಿ ಅದರ ಮುಂದಿನ ಪುಟದಲ್ಲಿ ಮಿಕ್ಕ ಮಾಹಿತಿ ಬರೆಯಬಾರದು. ಪುಟದ ಜಾಗವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಕ್ಕ ಪಕ್ಕ ವಿಭಾಗಗಳ ಸರದಿ ಅದಲು ಬದಲು ಮಾಡಬಹುದು. 
    ಎತ್ತುಗೆಗೆ (ಉದಾಹರಣೆಗೆ): ಒಬ್ಜೆಕ್ಟಿವ್,ಸಮ್ಮರಿ,ಎಜ್ಯುಕೇಷನಲ್ ಕ್ವಾಲಿಫಿಕೇಷನ್  ಇವು ಮೂರು ಸಾಮಾನ್ಯವಾಗಿ ಮೊದಲನೆ ಪುಟದಲ್ಲಿ ಮುಗಿಸಬಹುದು. ನಂತರ ಬರುವ ಕೋರ್ಸ್ ಹಾಗು ಸರ್ಟಿಫಿಕೇಷನ್‌ಗಳು ತಿಳಿಸಬೇಕಾದಾಗ ಸ್ವಲ್ಪವೆ ಜಾಗವಿರಬಹುದು, ಜಾಗ ಇದೆಯಲ್ಲ ಅಂತ ಶುರು ಮಾಡಿ ಅರ್ಧ ಆ ಪುಟದಲ್ಲಿ ಮತ್ತರ್ಧ ಮುಂದಿನ ಪುಟಕ್ಕೆ ಸಾಗುವಂತೆ ಮಾಡಬಾರದು. ಒಂದು ವಿಭಾಗದ ವಿಷಯ ಅದೆ ಪುಟದಲ್ಲಿ ಶುರು ಆಗಬೇಕು ಹಾಗು ಅದೆ ಪುಟದಲ್ಲಿ ಮುಗಿಯಬೇಕು.

೧. ಒಬ್ಜೆಕ್ಟಿವ್ (ಫ್ರೆಷರ್‌ಗಳಿಗೆ ಹೆಚ್ಚು ಉಪಯುಕ್ತ) - ಗುರಿ - ಇಲ್ಲಿ ನಾವು ತಿಳಿಸಬೇಕಾದ ಅಂಶ - ನಮ್ಮ ಕಾರ್ಯ ಜೀವನದ ಗುರಿ ಏನು, ಅದನ್ನು ಹೇಗೆ ಸಾಧಿಸಬೇಕು ಎಂದು ಬಯಸುತ್ತೇನೆ ಎಂದು ವರ್ಣಿಸಬೇಕು. ನಾವು ಕೆಲಸ ಕೇಳಿಕೊಂಡು ರೆಸ್ಯುಮೆ ಕಳಿಸುವುದರಿಂದ, ಕೆಲಸ ಕೊಡುವವರಿಗೂ ಸಹ ಅಭ್ಯರ್ಥಿಯಿಂದ ಕಂಪನಿಯ ಲಾಭ ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಆಲೋಚನೆ ಇರುತ್ತದೆ. ನಮಗೆ ನಮ್ಮ ಉದ್ಧಾರ ಎಷ್ಟು ಮುಖ್ಯವೊ ಕಂಪನಿಯ ಮಾಲಿಕರಿಗೆ ಕಂಪನಿಯ ಉದ್ಧಾರ ಮುಖ್ಯ. ಹಾಗಾಗಿ ನಾವು ನಮ್ಮ ಗುರಿ ತಿಳಿಸಬೇಕಾದರೆ ಗಮನದಲ್ಲಿರಬೇಕಾದ ಅಂಶ "ನಾನು ನನ್ನ ವಿಷಯ ಜ್ಞಾನ ಹಾಗು ನೈಪುಣ್ಯತೆಯನ್ನು ಸಂಸ್ಥೆ ಗುರಿ ಸಾಧಿಸುವುದಕ್ಕೆ ಅನುಗುಣವಾಗಿ ಉಪಯೋಗಿಸಲು ಇಚ್ಚಿಸುತ್ತೇನೆ.  ನಾನು ಹೊಸ ವಿಷಯಗಳನ್ನು ಕಲಿತು ಅದನ್ನು ಸಂಸ್ಥೆಯ ಕೆಲಸದಲ್ಲಿ ಉಪಯೋಗಿಸಿ ಸಂಸ್ಥೆಯು ತನ್ನ ಗುರಿ ಮುಟ್ಟುವುದಕ್ಕೆ ಸಹಾಯ ಮಾಡುವುದು ನನ್ನ ಇಚ್ಚೆ" ಅನ್ನುವ ಅರ್ಥ ಬರುವ ಹಾಗೆ ವಾಕ್ಯ ರಚಿಸಬೇಕು. ಇದನ್ನೆ ನಂಬಿ ನಿಮಗೆ ಕೆಲಸ ಕೊಡುವುದಿಲ್ಲ ಆದರೆ ನಿಮ್ಮ ಗುರಿ ಓದಿ ಅಭ್ಯರ್ಥಿಗೆ ಕೊಡುವ ಕೆಲಸದ ಜವಾಬ್ದಾರಿ(ಕಂಪನಿ ಉದ್ಧಾರ ಮಾಡೊದು) ಗೊತ್ತಿದೆ ಎನ್ನುವುದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ರೆಸ್ಯುಮೆಯನ್ನು ಮುಂದಕ್ಕೆ ಓದಲು ಆಸಕ್ತಿ ವಹಿಸುತ್ತಾರೆ.

ಪ್ರತಿ ಹಂತದಲ್ಲೂ ರೆಸ್ಯುಮೆ ಓದುವವರ ಆಸಕ್ತಿ ಉಳಿಸಿಕೊಳ್ಳುವುದು ರೆಸ್ಯುಮೆಯ ಉದ್ದೇಶವಾಗಿರಬೇಕು. ರೆಸ್ಯುಮೆ ಒಬ್ಜೆಕ್ಟಿವ್ ಎಕ್ಸಾಂಪಲ್ ಎಂದು ಗೂಗಲ್ ಮಾಡಿದಲ್ಲಿ ನಿಮಗೆ ಯಾವ ಯಾವ ರೀತಿ ಒಬ್ಜೆಕ್ಟಿವ್ ಬರೆಯಬಹುದು ಎಂದು ತಿಳಿಯುತ್ತದೆ. ಅವುಗಳಲ್ಲಿ ಯಾವುದಾದರು ಒಂದನ್ನು ಕಾಪಿ ಮಾಡಿ ಉಪಯೋಗಿಸಿಕೊಳ್ಳಿ.  ಎಚ್ಚರ : ಉಪಯೋಗಿಸುವ ಪದಗಳು ಆದಷ್ಟು ಸರಳವಾಗಿರಲಿ, ಕ್ಲಿಷ್ಟವಾದ ಪದ ಬಳಕೆ ಮಾಡಬೇಡಿ. ಪದಗಳ ಅರ್ಥ ರೆಸ್ಯುಮೆ ಓದುವವರಿಗೆ ಅರ್ಥ ಆಗಲಿಲ್ಲವೆಂದರೆ ಅಸಕ್ತಿ ಹೋಗುತ್ತದೆ, ಅವರಲ್ಲಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲವಲ್ಲ ಅಂತ ಕೀಳರಿಮೆ ಉಂಟಾಗಿ ರೆಸ್ಯುಮೆಯನ್ನು ಆಯ್ಕೆ ಮಾಡದೆಯು ಇರಬಹುದು!!

೨. ಸಮ್ಮರಿ (ಅನುಭವ ಇರುವವರಿಗೆ ರೆಯುಮೆಯಲ್ಲಿ ಇದು ಮೊದಲು ಇರಬೇಕು )- ಸಾರ - ಇಲ್ಲಿ ನಾವು ತಿಳಿಸಬೇಕಾದ ಅಂಶ - ನಮ್ಮ ಅಷ್ಟೂ ವರ್ಷದ ಕೆಲಸದ ಅನುಭವ ಸಾರವನ್ನು ಗರಿಷ್ಟ ೩-೪ ಸಾಲಿನಲ್ಲಿ ವರ್ಣಿಸುವ ಜವಾಬ್ದಾರಿ ಬರುತ್ತದೆ!!! ಇಲ್ಲಿ ಎಡವಟ್ಟಾದರೆ ಮುಂದೆ ರೆಸ್ಯುಮೆ ಓದುವುದಕ್ಕೆ ಆಸಕ್ತಿ ಮೂಡಿಸುವುದು ಕಷ್ಟವಾಗುತ್ತದೆ. ಇಂಪ್ರೆಸ್ಸಿವ್ ಅಂಶ ಎಂದರೆ ನೀವು "ಐ ಆಮ್ ಎ ಪ್ರೊಫೆಷನಲ್ ವಿತ್ "ಇಷ್ಟು" ಇಯರ್ಸ್ ಎಕ್ಸ್ಪೀರಿಎನ್ಸ್ ಇನ್ "ಇಂತಹ"ಡೊಮೈನ್. ಐ ಹ್ಯಾವ್ ಹ್ಯಾಂಡಲ್ಡ್ "ಇಂತಹ" ಟಾಕ್ಸ್ ಅಂಡ್ ಇನ್ವಾಲ್ವ್ಡ್ ಇನ್ "ದೀಸ್" ಅಕ್ಟಿವಿಟೀಸ್. "ಇಂಥದ್ದೆ" ಕೆಲಸ ಬೇಕು ಎನ್ನುವವರು ಐ ಆಮ್ ಇಂಟೆರೆಸ್ಟೆಡ್ ಟು ವರ್ಕ್ ಇನ್ "ದಿಸ್" ಏರಿಯಾ ಅಂತ ಸಮ್ಮರಿಯನ್ನು ಮುಂದುವರಿಸಿ ಮುಗಿಸಬಹುದು.
   ಈ ಸಮ್ಮರಿಯಲ್ಲಿ "ಇಷ್ಟು","ಇಂತಹ"(ಹೆಚ್ಚು ಡೊಮೈನ್ ಅಲ್ಲಿ ಕೆಲಸ ಮಾಡಿದ್ದರೆ ಅವೆಲ್ಲವನ್ನು ಬರೆಯಿರಿ) "ದಿಸ್" "ದೀಸ್" "ಇಂಥದ್ದೆ" ಅನ್ನೋದನ್ನ ತುಂಬಿಸುತ್ತಾ ಹೋದರೆ ೪-೫ ಸಾಲು ಆಗುವುದು ಖಂಡಿತ.

೩. ಎಜ್ಯುಕೇಷನಲ್ ಕ್ವಾಲಿಫಿಕೇಷನ್ - ಶೈಕ್ಷಣಿಕ ಅರ್ಹತೆ - ಇದರಲ್ಲಿ ಒಂದು ಟೇಬಲ್ ಹಾಕಿ ಕಾಲಂಗಳಲ್ಲಿ ನಿಮ್ಮ್ ಐತ್ತೀಚಿನ ಅರ್ಹತೆ,ಕಾಲೇಜು,ಯುನಿವರ್ಸಿಟಿ,ಪಾಸಾದ ವರ್ಷ/ತಿಂಗಳು ಹಾಗು ಕೊನೆಯದಾಗಿ ಅಗ್ರಿಗೇಟ್  % ಬರೆಯಬೇಕು.ಹೀಗೆ ಟೇಬಲ್‌ನ ಪ್ರತಿ ಅಡ್ಡಸಾಲಿನಲ್ಲು ನಿಮ್ಮ ಪ್ರತಿ ಶೈಕ್ಷಣಿಕ ಅರ್ಹತೆ ತಿಳಿಸಿ (ಎಸ್.ಎಸ್.ಎಲ್.ಸಿ ವರೆಗು) ಅದರ ಎಲ್ಲಾ ಮಾಹಿತಿ ಬರೆಯಬೇಕು. ಈ ರೀತಿ ಟೇಬಲ್ ಬಳಸಿದ ಮಾಹಿತಿ ಇದ್ದರೆ ನೋಡಲು ಅಚ್ಚುಕಟ್ಟಾಗಿರುತ್ತದೆ. ಟೆಬಲ್ ಇಲ್ಲದೆಯು ಸಹ ಪ್ರತಿ ಶೈಕ್ಷಣಿಕ ಅರ್ಹತೆಯನ್ನು ಸಾಲಿಗೊಂದರಂತೆ ಬರೆಯಬಹುದು.. ಆದರೆ ಪೂರ್ಣ ಮಾಹಿತಿ ತಿಳಿಸಿರಬೇಕು.  

೪. ಕೋರ್ಸ್ ಹಾಗು ಸರ್ಟಿಫಿಕೇಷನ್‌ಗಳು - ಸಾಲಿಗೊಂದರಂತೆ(ಒಂದಕ್ಕಿಂತ ಹೆಚ್ಚಿದ್ದಲಿ) ಕೋರ್ಸ್ ಅಥವಾ ಸರ್ಟಿಫಿಕೇಷನ್‌‌ನ ಸಂಪೂರ್ಣ ಮಾಹಿತಿ ನೀಡಬೇಕು. ಇದು ಅವಶ್ಯಕ ಅಂತ ಅಲ್ಲ, ಇದ್ದಲ್ಲಿ ನಿಮ್ಮನ್ನು ಆಯ್ಕೆ ಮಾಡಲು ಸಹಾಯಕವಾಗುತ್ತದೆ. ಎಲ್ಲರಿಗಿಂತ ಹೆಚ್ಚು ತಿಳಿದುಕೊಂಡಲ್ಲಿ ನಿಮಗೆ ಹೆಚ್ಚು ಲಾಭ ಅಲ್ಲವೆ? ಕೆಲಸ ಹುಡುಕುತ್ತಿರುವಾಗ ಕೋರ್ಸ್ ಮಾಡುವುದು ಉತ್ತಮ. ನಿಮ್ಮ ಆಯ್ಕೆಗಳು ಹೆಚ್ಚಾಗುತ್ತವೆ.
ಇವನ್ನು ತಿಳಿಸಬೇಕಾದರೆ ಪ್ರತಿ ಸಾಲಿಗೂ ಬುಲೆಟ್ ಪಾಯಿಂಟ್ಸ್ ಬಳಸಬೇಕು, ಇಂಪ್ರೆಸ್ಸಿವ್ ಆಗಿ ಕಾಣುತ್ತದೆ.  
 
೫. ಟೆಕ್ನಿಕಲ್ ಸ್ಕಿಲ್ - ತಾಂತ್ರಿಕ ನೈಪುಣ್ಯತೆ - ಇಲ್ಲಿ ತಿಳಿಸುವ ಮಾಹಿತಿಯನ್ನು ಆದಷ್ಟು ವಿಂಗಡಿಸಿ ತಿಳಿಸಬೇಕು.
 ಅ. ಪ್ರೋಗ್ರಾಮಿಂಗ್ ಲಾಂಗ್ವೇಜ್‌ಗಳು
 ಆ. ಸಾಫ್ಟ್‌ವೇರ್ ಟೂಲ್ಸ್‌ಗಳು
 ಇ. ಹಾರ್ಡ್‌ವೇರ್ ಟೂಲ್ಸ್‌ಗಳು
 ಈ. ಕ್ವಾಲಿಟಿ ಸ್ಟಾಂಡರ್ಡ್
 .ಕಂಪ್ಯೂಟರ್ ನೈಪುಣ್ಯತೆ
ಹೀಗೆ ನಿಮ್ಮ ಸಂಬಂಧಪಟ್ಟ ವಿಷಯಗಳ ಪಟ್ಟಿ ಮಾಡಿ ವರ್ಗೀಕರಿಸಬೇಕು ಕಡೆಯದಾಗಿ ಯಾವುದಾದರು ವಿಷಯದ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದಲ್ಲಿ ಅದನ್ನು ಸಹ "ವಿಷಯ ಜ್ಞಾನ/ನಾಲೆಡ್ಜ್ ಅಬೌಟ್ -"ಎಂದು ವರ್ಗೀಕರಿಸಿ ಹಾಕಿಕೊಳ್ಳಬಹುದು.

೬. ಇಂಟರ್ನ್‌ಷಿಪ್ / ಟ್ರೈನಿಂಗ್ / ಅಪ್ರೆಂಟಿಸ್ - ನೀವು ನಿಮ್ಮ ರಜಾ ದಿನಗಳಲ್ಲಿ ಅಥವಾ ಓದು ಮುಗಿದ ನಂತರ ಮಾಡಿದ, ಕೆಲಸ ಸಿಗಲು ಅನುಕೂಲವಾಗುವಂತಹ  ಇಂಟರ್ನ್‌ಷಿಪ್, ಅಪ್ರೆಂಟಿಸ್‌ಷಿಪ್ ಅಥವಾ ಟ್ರೈನಿಂಗ್‌ಗಳ ಬಗ್ಗೆ ಬರೆಯಬಹುದು. ಯಾವ ಸಂಸ್ಥೆಯಲ್ಲಿ ಮಾಡಿದಿರಿ? ಎಷ್ಟು ವಾರ/ತಿಂಗಳು ಮಾಡಿದಿರಿ? ನಿಮ್ಮ ಜವಾಬ್ದಾರಿ ಹಾಗು ಕೆಲಸ ಏನಿತ್ತು? ನೀವು ಆಲ್ಲಿ ಕಲಿತಿದ್ದೇನು? ಈ ವಿಚಾರಗಳನ್ನು ಒಂದೊಂದಾಗಿ ಬರೆಯಬೇಕು. 
ಇವನ್ನು ತಿಳಿಸಬೇಕಾದರೆ ಪ್ರತಿ ಸಾಲಿಗೂ ಬುಲೆಟ್ ಪಾಯಿಂಟ್ಸ್ ಬಳಸಬೇಕು, ಇಂಪ್ರೆಸ್ಸಿವ್ ಆಗಿ ಕಾಣುತ್ತದೆ.  

೭. ವರ್ಕ್ ಎಕ್ಸ್‌ಪೀರಿಯನ್ಸ್ - ಕೆಲಸದ ಅನುಭವ - ಈ ವಿಭಾಗದಲ್ಲಿ ನೀವು ಇತ್ತೀಚಿನ ಕೆಲಸದ ಮಾಹಿತಿ ನೀಡಬೇಕು. ಕೆಲವೊಮ್ಮೆ  ಓದು ಮುಗಿದ ಮೇಲೆ ಆ ಸಮಯಕ್ಕೆ ಸಿಕ್ಕ ಕೆಲಸ ಮಾಡುತ್ತಾರೆ ಅದಾದ ಮೇಲೆ ಆ ಕೆಲಸ ಇಷ್ಟವಾಗದ ಅಥವಾ ಇತರ ಕಾರಣಗಳಿಂದ ಬೇರೆಯದೆ ಆದ ಕೆಲಸ ಮಾಡುತ್ತಾರೆ. ಆ ರೀತಿ ಹಳೆಯ ಅನುಭವದ ಸಂಬಂಧವಿಲ್ಲದ ಕೆಲಸಕ್ಕೆ ಸೇರಿದಾಗ ಹಳೆಯ ಅನುಭವವೆಲ್ಲ ನಷ್ಟವಾಗುತ್ತದೆ. ಆ ಅನುಭವವನ್ನು ತಿಳಿಸುವುದು ಉಪಯೋಗಕ್ಕೆ ಬರುವುದಿಲ್ಲ, ಹೀಗಿದ್ದಾಗ ನಿಮಗಿಷ್ಟವಿರುವ ಕೆಲಸಕ್ಕೆ ಸಂಬಂಧವಾಗುವಂತಹ ಅನುಭವವನ್ನು ಮಾತ್ರ "ರೆಲೆವನ್ಟ್ ಎಕ್ಸ್‌ಪೀರಿಯನ್ಸ್" ಎಂದು ವಿಂಗಡಿಸಿ ಬರೆಯಿರಿ.
   ಪ್ರತಿ ವರ್ಕ್ ಎಕ್ಸ್‌ಪೀರಿಯನ್ಸ್ ವಿವರಿಸುವಾಗಲೂ ಒಂದು ಸಾಲಿನಲ್ಲಿ "ಸಂಸ್ಥೆಯ ಹೆಸರು" ಎಂದು ಬರೆದು ಅದರ ಮುಂದೆ ನಿಮ್ಮ ಸದ್ಯದ/ಕಡೆಯ ಸಂಸ್ಥೆಯ ಹೆಸರನ್ನು ಬರೆಯಿರಿ, ಕೆಳಗಿನ ಸಾಲು ಶುರು ಮಾಡಿದಾಗ "ಡೆಸಿಗ್ನೇಷನ್" ಎಂದು ಬರೆದು ಅದರ ಮುಂದೆ  ನಿಮ್ಮ ಸದ್ಯದ/ಕಡೆಯ ಸಂಸ್ಥೆಯಲ್ಲಿ ಹುದ್ದೆ ಬರೆಯಿರಿ, ಮತ್ತೊಂದು ಸಾಲಿನಲ್ಲಿ ರೆಸ್ಪಾಸಿಬಿಲಿಟೀಸ್ ಎಂದು ಬರೆದು ಅದರ ಮುಂದೆ  ಆ ಸಂಸ್ಥೆಯಲ್ಲಿ ಕೆಲಸ ಮಾಡಿದ ಅವಧಿಯಲ್ಲಿನ ಪಾತ್ರ(ರೋಲ್ಸ್) ಹಾಗು ಜವಾಬ್ದಾರಿಗಳನ್ನು (ರೆಸ್ಪಾಸಿಬಿಲಿಟೀಸ್) ಬರೆಯಿರಿ,ಪ್ರಾಜೆಕ್ಟ್ ಟಾಸ್ಕ್ ಅಲ್ಲದೆ ನೀವು ತೊಡಗಿಸಿಕೊಂಡ ಇತರೆ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಕೆಲಸದ ವಿವರವನ್ನು ಬರೆಯಬೇಕು. ಹೆಚ್ಚಿನ ಜವಾಬ್ದಾರಿಯುತ ಕೆಲಸಗಳ ಪಟ್ಟಿ ಮಾಡಿದರೆ ನಿಮ್ಮ ಕೆಲಸದ ಅನುಭವ ಓದುಗರಿಗೆ ಆಸಕ್ತಿ ಮೂಡಿಸುತ್ತದೆ ಹಾಗಂತ ಇಂಜಿನಿಯರ್ ಹುದ್ದೆಗೆ ಅಪ್ಪ್ಲೈ ಮಾಡಿ ಮ್ಯಾನೇಜರ್ ಮಾಡುವ ಕೆಲಸದ ಜವಾಬ್ದಾರಿ ನಿಭಾಯಿಸಿದ್ದೆ ಎಂದು ಬರೆಯಬೇಡಿ, ನಂಬುವ ಮಟ್ಟಕ್ಕೆ ಮಾತ್ರ ನಿಮ್ಮ ಮಾತುಗಳಲ್ಲಿ ನಿಜಾಂಶ ಇರಲಿ :) . ಏನೇ ಬರೆದರೂ ಆ ವಿಷಯದ/ಜವಾಬ್ದಾರಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು.
 ಹೀಗೆ ಪ್ರತಿ ಕಂಪನಿಯಲ್ಲಿ ಗಳಿಸಿದ ವರ್ಕ್ ಎಕ್ಸ್‌ಪೀರಿಯನ್ಸ್ ಅನ್ನು ವಿವರಿಸಬೇಕು.

ಮುಂದಿನ ಕಂತಿನಲ್ಲಿ ರೆಸ್ಯುಮೆಯ ಉಳಿದ ಮುಖ್ಯ ವಿಭಾಗಗಳ ಬಗ್ಗೆ ತಿಳಿಸುತ್ತೇನೆ...

Monday, January 17, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೩

ಹಿಂದಿನ ಪೋಸ್ಟ್‌ಗಳಲ್ಲಿ "ಏನು ಮಾಡಬಾರದು,ಯಾವುದು ತಪ್ಪು,ಯಾವುದು  ಅಸಂಭದ್ದ.." ಎನ್ನುವಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು ಯಾಕೆಂದರೆ ಏನು ಮಾಡಬಾರದು ಎನ್ನುವುದು ತಿಳಿದುಕೊಂಡ ನಂತರ ಏನು ಮಾಡಬಹುದು ಎನ್ನುವುದರತ್ತ ಗಮನ ಹರಿಸಿದಾಗ ಹೆಚ್ಚಿನ ಉತ್ತರಗಳು ದೊರೆಯುತ್ತವೆ.

ಕವರಿಂಗ್ ಲೆಟರ್  ಎಂದರೇನು, ಅದು ಯಾಕೆ ಬೇಕು?
       ನಿಮ್ಮ ರೆಸ್ಯುಮೆ/ಬಯೊ ಡೇಟಾ ೩-೪ ಪುಟ ಇರುವುದು ಸಾಮಾನ್ಯ, ಕನಿಷ್ಟ ೨ ಪುಟ ಆದ್ರು ಇರಬಹುದು. ಒಂದು ಹುದ್ದೆಗೆ ೫೦-೧೦೦ ರೆಸ್ಯುಮೆ ತಲುಪುತ್ತೆ ಅಂತ ಯೋಚಿಸಿದರೆ,ರೆಸ್ಯುಮೆ ನೋಡಿ ಪರಿಶೀಲಿಸುವ ವ್ಯಕ್ತಿಗೆ ಅವು ೧೦೦-೨೦೦ ಪುಟ ಹಾಳೆಗಳು ಅಲ್ಲವೆ? ಪರಿಸ್ಥಿತಿ ಈ ರೀತಿ ಇದ್ದಾಗ ನಿಮ್ಮ ರೆಸ್ಯುಮೆ ಕೊನೆಯಲ್ಲಿ ತಲುಪಿತು ಅಂತ ಯೋಚಿಸಿದರೆ ೨೦೦ ಪುಟ ತಿರುಗಿಸುವ ಹೊತ್ತಿಗೆ ರೆಸ್ಯುಮೆ ನೋಡುವ ವ್ಯಕ್ತಿಯ ತಾಳ್ಮೆ ಹೇಗಿರಬಹುದು?? ನಿಮ್ಮ ರೆಸ್ಯುಮೆಯನ್ನು ತಾಳ್ಮೆವಹಿಸಿ ನೋಡಬಹುದು ಅಂತ ಎಷ್ಟರ ಮಟ್ಟಿಗೆ ನಂಬಿಕೆ ಇಡಬಹುದು. ಈ ಅಂಕಿ ಅಂಶ ಹೀಗೆಯೆ ಇರುವುದಿಲ್ಲ, ಕೆಲವರ ರೆಸ್ಯುಮೆ ೪ ಪುಟದ್ದಾಗಿರಬಹುದು,ಕನ್ನಡದಲ್ಲಿ ಕೆಲಸ ಖಾಲಿ ಇದೆ ಅಂದರೇನೆ ೫೦-೧೦೦ ಬರುತ್ತೆ ಅಂಥಾದ್ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೆಲಸ ವಿವರ ಕಳಿಸಿದಾಗ ಕೇವಲ ಕನ್ನಡಿಗರದಲ್ಲದೆ ಕನ್ನಡೇತರರದ್ದು ಸೇರಿ ಬರುವ ಒಟ್ಟು ರೆಸ್ಯುಮೆ ೨೦೦ ದಾಟಬಹುದು ಹಾಗಿದ್ದಾಗ ಪರಿಸ್ಥಿತಿ ನೀವೆ ಊಹಿಸಿ!!!
         ಹೀಗಿದ್ದಾಗ ನಿಮ್ಮ ರೆಸ್ಯುಮೆ ಕಡೆ ಕಣ್ಣು ಹಾಯಿಸುವ ಹಾಗೆ ಮಾಡುವ ತಂತ್ರವೇನು?? ಒಂದು ಗುಂಪಿನಲ್ಲಿದಾಗ ಗುರುತಿಸಿಕೊಳ್ಳುವುದೆ ಹೇಗೆ, ನಾವು ವಿಶೇಷವಾಗಿ ಕಾಣುವಂತಿದ್ದರೆ ನೋಡುತ್ತಾರೆ ಆಸಕ್ತಿ ವಹಿಸುತ್ತಾರೆ ಇಲ್ಲಾಂದ್ರೆ ವಿಚಿತ್ರವಾಗಿ
ಇದ್ರು ನೋಡ್ತಾರೆ ಆದ್ರೆ ಆಸಕ್ತಿ ತೋರಿಸಲ್ಲ. ಹಾಗಾಗಿ ನಮ್ಮ ರೆಸ್ಯುಮೆಯನ್ನು ಇತರರು ಆಸಕ್ತಿ ವಹಿಸಿ ನೋಡಲು ವಿಶೇಷ ತಂತ್ರ ಬಳಸಬೇಕು.ಆ ತಂತ್ರಗಳೆ ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಹಾಗು ಫಾರ್ಮ್ಯಾಟೆಡ್ ರೆಸ್ಯುಮೆ.
       ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಸಹ ಒಂದು ತಂತ್ರ ಯಾಕೆಂದರೆ ನಿಮ್ಮ ೩-೪ ಪುಟದ ರೆಸ್ಯುಮೆಯನ್ನಂತು ಕಮ್ಮಿ ಮಾಡಲು ಆಗುವುದಿಲ್ಲ, ನಿಮ್ಮ ರೆಸ್ಯುಮೆಯಲ್ಲಿ/ಬಯೊ ಡೇಟಾನಲ್ಲಿ ನಿಮ್ಮ ವೃತ್ತಿಜೀವನದ ಗುರಿ,ನಿಮ್ಮ ಓದಿನ ಇತಿಹಾಸ, ಕೈಗೊಂಡ ಯೋಜನೆಗಳು/ಪ್ರಾಜೆಕ್ಟ್, ಇಂಟರ್ನ್‌ಶಿಪ್ ಮಾಹಿತಿ, ಗಳಿಸಿದ ಮನ್ನಣೆಗಳು ಹಾಗು ಸರ್ಟಿಫಿಕೇಷನ್‌ಗಳು, ಹವ್ಯಾಸಗಳು, ತಿಳಿದಿರುವ ಭಾಷೆಗಳ ಬಗ್ಗೆ ಮಾಹಿತಿ ಇರಬೇಕಾದದ್ದು ಅತ್ಯವಶ್ಯ ಹೀಗಿದ್ದಾಗ ಇಷ್ಟೆಲ್ಲಾ ಮಾಹಿತಿಯ ಸಾರವನ್ನು ಪ್ರತಿಬಿಂಬಿಸುವ ಕೆಲಸ ಕೇವಲ ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಮಾತ್ರ ಮಾಡಬಹುದು.
 
   ನೀವು ಗೂಗಲ್‌ನಲ್ಲಿ ಯಾವುದೆ ಮಾಹಿತಿಯನ್ನು ಹುಡುಕಬೇಕಾದರು ಅಗತ್ಯವಿರುವ "ಕೀವರ್ಡ್" ಕೊಟ್ಟು ಹುಡುಕುತ್ತೀರಾ ಹಾಗೆಯೆ ರೆಸ್ಯುಮೆ ಪರಿಶೀಲಿಸುವವರು ಸಹ ಅವರಿಗೆ ಅಗತ್ಯವಿರುವ ಕೀವರ್ಡ್‌ಗಳನ್ನು ನೀವು ಕಳಿಸಿದ ಮಿಂಚೆ/ರೆಸ್ಯುಮೆಯಲ್ಲಿ ಹುಡುಕುತ್ತಿರುತ್ತಾರೆ. ನೀವು ಕವರಿಂಗ್ ಲೆಟರ್ ಕಳಿಸದೆ ಇದ್ದರೆ?? ಇನ್ಬಾಕ್ಸ್ ಅಲ್ಲಿ ಬಿದ್ದ ೧೦೦-೨೦೦ ರೆಸ್ಯುಮೆಯಲ್ಲಿ ಒಂದೊಂದನ್ನೆ ಡೌನ್ ಲೋಡ್ ಮಾಡಿ ಅದನ್ನು ತೆಗೆದು ಕೀವರ್ಡ್‌ಗಾಗಿ ಹುಡುಕುತ್ತಾ ಕೂರುತ್ತಾರೆ ಎಂದು ಭಾವಿಸುತ್ತೀರಾ? ಇಲ್ಲ, ಈ ಪದ್ಧತಿ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಯಾರು ಆ ರೀತಿಯಾಗಿ ಮಾಡುವುದಿಲ್ಲ ಹಾಗಾಗಿ ಕವರಿಂಗ್ ಲೆಟರ್ ಅಲ್ಲಿ ಕೀವರ್ಡ್‌ಗಳು ಕಾಣಿಸುವುದು ಅತ್ಯವಶ್ಯ.
        ಈ ಕೀವರ್ಡ್‌ಗಳು ಯಾವುದು? ಕೀವರ್ಡ್‌ಗಳು - ಹುದ್ದೆಗೆ ಸಂಬಂಧಪಟ್ಟ ಪದಗಳು. ಎತ್ತುಗೆ(ಉದಾಹರಣೆ)ಗೆ, ಹುದ್ದೆಗೆ ಅಗತ್ಯವಿರುವ ಸೂಕ್ತ ಅಭ್ಯರ್ಥಿಯ ಅರ್ಹತೆ  - "ಫ್ರೆಶರ್ /ಅನುಭವಸ್ಥನೊ" ಬೇಕಿದ್ದು "ಇಂತಹ" ಡೊಮೈನ್/ಫೀಲ್ಡ್ ಅಲ್ಲಿ ಪರಿಣಿತಿ ಹೊಂದಿದ್ದು, "ಇಷ್ಟು" ವರ್ಷ ಅನುಭವ ಹೊಂದಿದ್ದು, "ಇಂತಹ" ಪ್ರಾಜೆಕ್ಟ್‌ಗಳ ಮೇಲೆ ಕೆಲಸ ಮಾಡಿದ್ದು ಅಥವಾ "ಇಂತಹ" ಸಾಫ್ಟ್‌ವೇರ್ ಟೂಲ್‌ಗಳ ಜ್ಞಾನವಿದ್ದು. "ಇಂತಹ" ಮನ:ಸ್ಥಿತಿ ಉಳ್ಳ ವ್ಯಕ್ತಿಗಳು ಅಪ್ಪ್ಲೈ ಮಾಡಬಹುದು ಅಂತ ಅವರು ತಿಳಿಸಿದರೆ (ಟೀಂ ಪ್ಲೇಯರ್ ಆಗಿರುವುದು, ಒಂಟಿಯಾಗಿ ಕಮ್ಮಿ ಮಾರ್ಗದರ್ಶನದಲ್ಲಿ, ಒತ್ತಡದ ಪರಿಸ್ಠಿತಿಗಳಲ್ಲಿ, ರಾತ್ರಿ ಪಾಳಿಯಲ್ಲಿ, ತುರ್ತು ಆದೇಶದ ಮೇಲೆ ಕೆಲಸ ಸಂಭಂದಿತ ತಿರುಗಾಟ, ಮಾತುಗಾರಿಕೆಯ ಕಲೆ - ಇಂತಹವು).

       ನಿಮ್ಮ ಕವರಿಂಗ್ ಲೆಟರ್ ಅಲ್ಲಿ ಹೆಚ್ಚು ಹೆಚ್ಚು ಕೀವರ್ಡ್ ಹಾಕಿದರೆ ನಿಮ್ಮ ರೆಸ್ಯುಮೆಯನ್ನು ಪರಿಗಣಿಸಲು ಹೆಚ್ಚು ಸಾಧ್ಯತೆಗಳಿರುತ್ತವೆ. ಕವರಿಂಗ್ ಲೆಟರ್ ಮುಖ್ಯ ಉದ್ದೇಶ ಎಂಪ್ಲಾಯರ್‌ಗೆ ಕಷ್ಟ ಕೊಡದ ರೀತಿ ಅವರು ಬಯಸಿದ ಮಾಹಿತಿಯನ್ನು  ಒದಗಿಸುವುದು  ಹಾಗೆಂದ ಮಾತ್ರಕ್ಕೆ ಕವರಿಂಗ್ ಲೆಟರ್ ಕಥೆಯ ರೀತಿ ಪುಟಗಟ್ಟಲೆ ಇರಬಾರದು ಅದನ್ನು ೩-೪ ಸಾಲಿನ ೩ ಭಾಗಗಳಿಗೆ ಸೀಮಿತವಾಗಿಸಬೇಕು. ಪ್ರತಿ ಭಾಗವು ಒಂದೊಂದು ಮಾಹಿತಿ ನೀಡುವಂತಿರಬೇಕು..

ಭಾಗ ೧ - ಎಂಪ್ಲಾಯರ್‌ ಏನು ಹುಡುಕ್ತಿದಾರೊ ಆ ಕೆಲಸ ಮಾಡಲು ಅಗತ್ಯವಿರುವ ಗುಣ/ಕಲೆ/ಆಸಕ್ತಿ ನಮ್ಮಲಿದೆ ಅಂತ ತೋರಿಸಿಕೊಳ್ಳೊದು. ಎಂಪ್ಲಾಯರ್‌ಗೆ ಈ ಅಭ್ಯರ್ಥಿಯ ಆಸಕ್ತಿ/ಅನುಭವ ಕೆಲಸಕ್ಕೆ ಅನುಗುಣವಾಗಿ ಇದೆ ಅಂತ ಅನಿಸಿದರೆ ಒಂದು ಪರೀಕ್ಷೆಯಲ್ಲಿ ಪಾಸಾದಂತೆ.
  ಹಾಗಾಗಿ ಅವರಿಗೆ ಸೂಕ್ತ ಎನಿಸುವ ಹಾಗೆ, ಅಭ್ಯರ್ಥಿಯು ತಮ್ಮ ಕವರಿಂಗ್ ಲೆಟರ್‌ನ ಮೊದಲನೆ ಭಾಗದಲ್ಲಿ ೨-೩ ಸಾಲುಗಳಲ್ಲಿ ಬರೆಯಬೇಕಾದ ಅಂಶ.. ನಾನು "ಇಂತಹ"(ಅವರಿಗೆ ಬೇಕಾಗಿರುವ) ಕೆಲಸ ನಿರ್ವಹಿಸಿದ್ದೇನೆ,  ಅನುಭವ ಇಲ್ಲದೆ ಹೋದಲ್ಲಿ ನನಗೆ "ಇಂತಹ"(ಹುದ್ದೆಗೆ ತಕ್ಕಂತಹ ವಿಷಯ ಜ್ಞಾನ/ಟೂಲ್ಸ್/ಸಾಫ್ಟ್ವೇರ್) ಜ್ಞಾನ ಇದೆ ಮತ್ತು "ಇಂತಹ"(ಅವರಿಗೆ ಬೇಕಾಗಿರುವ) ಕೆಲಸ ನಿಭಾಯಿಸಲು ಬಹಳ ಆಸಕ್ತನಾಗಿದ್ದೇನೆ ಎನ್ನುವ ಅರ್ಥ ಬರುವ ಸಾಲಿನಲ್ಲಿ ಬರೆಯಬೇಕು.

ಭಾಗ್ ೨ - ಈ ಭಾಗದಲ್ಲಿ ನೀವು "ಮೊದಲನೆ ಭಾಗಕ್ಕೆ ಹೊಂದುವಂತಹ" ನಿಮ್ಮ ಸಾಧನೆ/ವಿಷಯ ಜ್ಞಾನದ ಬಗ್ಗೆ, ರೆಸ್ಯುಮೆಯಲ್ಲಿ ತಿಳಿಸಿರುವ ವಿಷಯದ "ಸಾರ" ಬರೆಯಬೇಕು.      
   ಹಾಗಾಗಿ, ಅಭ್ಯರ್ಥಿಯು ತಮ್ಮ ಕವರಿಂಗ್ ಲೆಟರ್‌ನ ಎರಡನೆ ಭಾಗದಲ್ಲಿ ೪-೫ ಸಾಲುಗಳಲ್ಲಿ ಬರೆಯಬೇಕಾದ ಅಂಶ.. ನನಗೆ "ಇಷ್ಟು"ಪರ್ಸಂಟೇಜ್ ಇದೆ ,"ಇಂತಹ" ಕಾಲೇಜಿನಿಂದ "ಈ" ಬ್ರಾಂಚಿನಲ್ಲಿ, "ಈ" ವರ್ಷದ ಸಾಲಿನಲ್ಲಿ ಪಾಸಗಿದ್ದೇನೆ.ನಾನು ಹುದ್ದೆಗೆ ಅನುಕೂಲವಾಗುವಂತಹ "ಇಂತಹ" ಪ್ರಾಜೆಕ್ಟ್ ಮಾಡಿದ್ದೇನೆ, ಇಂತಹ "ಕೋರ್ಸ್" ಮಾಡಿದ್ದೇನೆ/ಮಾಡುತ್ತಿದ್ದೇನೆ ", "ಇಂತಹ" ತರಬೇತಿ ಪಡೆದಿದ್ದೇನೆ ಎಂದು ಬರೆಯಬೇಕು. ನಾನು ಒಳ್ಳೆಯ ಟೀಂ ಪ್ಲೇಯರ್, ಮಾತುಗಾರ, ಶ್ರದ್ಧೆಯಿಟ್ಟು ಕೆಲಸಮಾಡುವವ, ಜವಾಬ್ದಾರಿಯುತ .. ಎಂದು ಬಿಂಬಿಸಿಕೊಳ್ಳಬೇಕು.

ಒಟ್ನಲ್ಲಿ ನಿಮ್ಮ ಕವರಿಂಗ್ ಲೆಟರ್ ಇಷ್ಟು ಓದುವಷ್ಟರೊಳಗೆ ಎಂಪ್ಲಾಯರ್‌ಗೆ ಅನಿಸಬೇಕಾದ್ದು ಇಷ್ಟು
೧. ಅಭ್ಯರ್ಥಿಗೆ ಯಾವ ರೀತಿಯ ಕೆಲಸ ಖಾಲಿಯಿದೆ ಎಂದು ಜ್ಞಾನವಿದೆ/ ಕೆಲಸಕ್ಕೆ ಸೂಕ್ತ ವಿಷಯ ಜ್ಞಾನ ಇರುವಂತಿದೆ.
೨. ಅಭ್ಯರ್ಥಿಗೆ "ಹೆಚ್ಚಿನ ತರಬೇತಿ" ನೀಡುವ ಅವಶ್ಯಕತೆಯಿಲ್ಲ.
೩. ಇಂಟರ್ವ್ಯೂವ್ ಮಾಡಿದರೆ ಅವನ ಶ್ರದ್ಧೆ/ಮಾತುಗಾರಿಕೆ/ಜಾಣ್ಮೆ ತಿಳಿಯಬಹುದು.
೪. ಪಾಸ್ ಆದ ವರ್ಷ, %(ಅಗ್ರಿಗೇಟ್), ಬ್ರಾಂಚ್ ಎಲ್ಲವು ಸರಿ ಹೊಂದುತ್ತೆ.
  ಇಂಟರ್ವ್ಯೂವ್/ರಿಟನ್ ಟೆಸ್ಟ್‌ಗೆ ಕರೆಯೋಣ ಅಂತ ನಿರ್ಧಾರ ಮಾಡುವ ಮಟ್ಟಕ್ಕೆ ಎಂಪ್ಲಾಯರ್‌ ಆಲೋಚಿಸುತ್ತಾನೆ.

ಭಾಗ್ ೩ - ಈ ಭಾಗಕ್ಕೆ ಬರುವಷ್ಟರಲ್ಲಿ ನೀವು ಅಗತ್ಯವಿದ್ದದೆಲ್ಲ ಹೇಳಿ ಮುಗಿಸಿರಬೇಕು. ಬಾಕಿ ಏನೆ ಇದ್ರು ಅದು ವಿನಯತೆಯಿಂದ ಕೂಡಿದ, ರೆಸ್ಯುಮೆ ಕಳಿಸಿದ್ದರ ಪ್ರತ್ಯುತ್ತರಕ್ಕಾಗಿ ನಿರೀಕ್ಷಿಸುತ್ತಿದ್ದೇನೆ ಎಂಬ ಭಾವದೊಂದಿಗೆ ಕವರಿಂಗ್ ಲೆಟರ್ ಮುಗಿಯಬೇಕು.

ಅಂತ್ಯದಲ್ಲಿ ಯುವರ್ಸ್ ಸಿನ್ಸಿಯರ್ಲಿ ಎನ್ನುವುದರೊಂದಿಗೆ ಮುಗಿದರೆ ಉತ್ತಮ, ಅದಲ್ಲದೆ ಹೋದರು ಖಾಲಿ ಧನ್ಯವಾದಗಳು ಹೇಳುವುದರ ಬದಲಾಗಿ ನಿಮ್ಮ ಸಮಯಕ್ಕಾಗಿ ಧನ್ಯವಾದಗಳು (ಥ್ಯಾಂಕ್ಸ್ ಫಾರ್ ಯುವರ್ ಟೈಮ್)ಎಂದರೆ ಸರಿ.

      ಮುಖ್ಯವಾಗಿ ನಾವು ಅರಿಯಬೇಕಾದದ್ದು, ನಾವು ನಮ್ಮ ಪ್ರಾವೀಣ್ಯತೆಯನ್ನು, ಸಾಧನೆಗಳನ್ನು ಮಾರ್ಕೆಟ್ ಮಾಡಿಕೊಳ್ಳುವುದು. ನಮ್ಮ ಬೆನ್ನನ್ನು ನಾವೆ ತಟ್ಟಿಕೊಳ್ಳಬೇಕು.ಇದರ ಉದ್ದೇಶ, ಖಾಲಿ ಇರುವ ಹುದ್ದೆಗೆ ನಾನು ತಕ್ಕ ಅಭ್ಯರ್ಥಿ ಎಂದು ವ್ಯಕ್ತಪಡಿಸುವುದಕ್ಕಷ್ಟೆ, ಇತರರನ್ನು ಕೀಳಾಗಿ ತೋರಿಸಲು ಅಲ್ಲ ಅಥವಾ ತಾರತಮ್ಯ ಮಾಡಲು ಅಲ್ಲ ಅಥವಾ ಬಡಾಯಿ ಕೊಚ್ಚುವುದು ಸಹ ಉದ್ದೇಶವಲ್ಲ!!  ಸಮರ್ಪಕವಾಗಿ ನಮ್ಮ ಟ್ಯಾಲೆಂಟ್‌ಗಳ ಮಾರ್ಕೆಟ್ ಮಾಡಿಕೊಂಡಷ್ಟು ನಮಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುವುದರಲ್ಲಿ ಸಂಶಯವಿಲ್ಲ.

ಕೊನೆಗೆ ಕುಶಿಯಿಂದ ಹೇಳಬಹುದು ಅಮ್ಮ ನಾ sale ಆದೆ, MNC ಪಾಲಾದೆ ಅಂತ :)   

ಮುಂದಿನಭಾಗದಲ್ಲಿ ರೆಸ್ಯುಮೆ ಫಾರ್ಮ್ಯಾಟ್ ಬಗ್ಗೆ ತಿಳಿಸುತ್ತೇನೆ...