Monday, January 17, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೩

ಹಿಂದಿನ ಪೋಸ್ಟ್‌ಗಳಲ್ಲಿ "ಏನು ಮಾಡಬಾರದು,ಯಾವುದು ತಪ್ಪು,ಯಾವುದು  ಅಸಂಭದ್ದ.." ಎನ್ನುವಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು ಯಾಕೆಂದರೆ ಏನು ಮಾಡಬಾರದು ಎನ್ನುವುದು ತಿಳಿದುಕೊಂಡ ನಂತರ ಏನು ಮಾಡಬಹುದು ಎನ್ನುವುದರತ್ತ ಗಮನ ಹರಿಸಿದಾಗ ಹೆಚ್ಚಿನ ಉತ್ತರಗಳು ದೊರೆಯುತ್ತವೆ.

ಕವರಿಂಗ್ ಲೆಟರ್  ಎಂದರೇನು, ಅದು ಯಾಕೆ ಬೇಕು?
       ನಿಮ್ಮ ರೆಸ್ಯುಮೆ/ಬಯೊ ಡೇಟಾ ೩-೪ ಪುಟ ಇರುವುದು ಸಾಮಾನ್ಯ, ಕನಿಷ್ಟ ೨ ಪುಟ ಆದ್ರು ಇರಬಹುದು. ಒಂದು ಹುದ್ದೆಗೆ ೫೦-೧೦೦ ರೆಸ್ಯುಮೆ ತಲುಪುತ್ತೆ ಅಂತ ಯೋಚಿಸಿದರೆ,ರೆಸ್ಯುಮೆ ನೋಡಿ ಪರಿಶೀಲಿಸುವ ವ್ಯಕ್ತಿಗೆ ಅವು ೧೦೦-೨೦೦ ಪುಟ ಹಾಳೆಗಳು ಅಲ್ಲವೆ? ಪರಿಸ್ಥಿತಿ ಈ ರೀತಿ ಇದ್ದಾಗ ನಿಮ್ಮ ರೆಸ್ಯುಮೆ ಕೊನೆಯಲ್ಲಿ ತಲುಪಿತು ಅಂತ ಯೋಚಿಸಿದರೆ ೨೦೦ ಪುಟ ತಿರುಗಿಸುವ ಹೊತ್ತಿಗೆ ರೆಸ್ಯುಮೆ ನೋಡುವ ವ್ಯಕ್ತಿಯ ತಾಳ್ಮೆ ಹೇಗಿರಬಹುದು?? ನಿಮ್ಮ ರೆಸ್ಯುಮೆಯನ್ನು ತಾಳ್ಮೆವಹಿಸಿ ನೋಡಬಹುದು ಅಂತ ಎಷ್ಟರ ಮಟ್ಟಿಗೆ ನಂಬಿಕೆ ಇಡಬಹುದು. ಈ ಅಂಕಿ ಅಂಶ ಹೀಗೆಯೆ ಇರುವುದಿಲ್ಲ, ಕೆಲವರ ರೆಸ್ಯುಮೆ ೪ ಪುಟದ್ದಾಗಿರಬಹುದು,ಕನ್ನಡದಲ್ಲಿ ಕೆಲಸ ಖಾಲಿ ಇದೆ ಅಂದರೇನೆ ೫೦-೧೦೦ ಬರುತ್ತೆ ಅಂಥಾದ್ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೆಲಸ ವಿವರ ಕಳಿಸಿದಾಗ ಕೇವಲ ಕನ್ನಡಿಗರದಲ್ಲದೆ ಕನ್ನಡೇತರರದ್ದು ಸೇರಿ ಬರುವ ಒಟ್ಟು ರೆಸ್ಯುಮೆ ೨೦೦ ದಾಟಬಹುದು ಹಾಗಿದ್ದಾಗ ಪರಿಸ್ಥಿತಿ ನೀವೆ ಊಹಿಸಿ!!!
         ಹೀಗಿದ್ದಾಗ ನಿಮ್ಮ ರೆಸ್ಯುಮೆ ಕಡೆ ಕಣ್ಣು ಹಾಯಿಸುವ ಹಾಗೆ ಮಾಡುವ ತಂತ್ರವೇನು?? ಒಂದು ಗುಂಪಿನಲ್ಲಿದಾಗ ಗುರುತಿಸಿಕೊಳ್ಳುವುದೆ ಹೇಗೆ, ನಾವು ವಿಶೇಷವಾಗಿ ಕಾಣುವಂತಿದ್ದರೆ ನೋಡುತ್ತಾರೆ ಆಸಕ್ತಿ ವಹಿಸುತ್ತಾರೆ ಇಲ್ಲಾಂದ್ರೆ ವಿಚಿತ್ರವಾಗಿ
ಇದ್ರು ನೋಡ್ತಾರೆ ಆದ್ರೆ ಆಸಕ್ತಿ ತೋರಿಸಲ್ಲ. ಹಾಗಾಗಿ ನಮ್ಮ ರೆಸ್ಯುಮೆಯನ್ನು ಇತರರು ಆಸಕ್ತಿ ವಹಿಸಿ ನೋಡಲು ವಿಶೇಷ ತಂತ್ರ ಬಳಸಬೇಕು.ಆ ತಂತ್ರಗಳೆ ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಹಾಗು ಫಾರ್ಮ್ಯಾಟೆಡ್ ರೆಸ್ಯುಮೆ.
       ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಸಹ ಒಂದು ತಂತ್ರ ಯಾಕೆಂದರೆ ನಿಮ್ಮ ೩-೪ ಪುಟದ ರೆಸ್ಯುಮೆಯನ್ನಂತು ಕಮ್ಮಿ ಮಾಡಲು ಆಗುವುದಿಲ್ಲ, ನಿಮ್ಮ ರೆಸ್ಯುಮೆಯಲ್ಲಿ/ಬಯೊ ಡೇಟಾನಲ್ಲಿ ನಿಮ್ಮ ವೃತ್ತಿಜೀವನದ ಗುರಿ,ನಿಮ್ಮ ಓದಿನ ಇತಿಹಾಸ, ಕೈಗೊಂಡ ಯೋಜನೆಗಳು/ಪ್ರಾಜೆಕ್ಟ್, ಇಂಟರ್ನ್‌ಶಿಪ್ ಮಾಹಿತಿ, ಗಳಿಸಿದ ಮನ್ನಣೆಗಳು ಹಾಗು ಸರ್ಟಿಫಿಕೇಷನ್‌ಗಳು, ಹವ್ಯಾಸಗಳು, ತಿಳಿದಿರುವ ಭಾಷೆಗಳ ಬಗ್ಗೆ ಮಾಹಿತಿ ಇರಬೇಕಾದದ್ದು ಅತ್ಯವಶ್ಯ ಹೀಗಿದ್ದಾಗ ಇಷ್ಟೆಲ್ಲಾ ಮಾಹಿತಿಯ ಸಾರವನ್ನು ಪ್ರತಿಬಿಂಬಿಸುವ ಕೆಲಸ ಕೇವಲ ಸಂಕ್ಷಿಪ್ತವಾದ ಕವರಿಂಗ್ ಲೆಟರ್ ಮಾತ್ರ ಮಾಡಬಹುದು.
 
   ನೀವು ಗೂಗಲ್‌ನಲ್ಲಿ ಯಾವುದೆ ಮಾಹಿತಿಯನ್ನು ಹುಡುಕಬೇಕಾದರು ಅಗತ್ಯವಿರುವ "ಕೀವರ್ಡ್" ಕೊಟ್ಟು ಹುಡುಕುತ್ತೀರಾ ಹಾಗೆಯೆ ರೆಸ್ಯುಮೆ ಪರಿಶೀಲಿಸುವವರು ಸಹ ಅವರಿಗೆ ಅಗತ್ಯವಿರುವ ಕೀವರ್ಡ್‌ಗಳನ್ನು ನೀವು ಕಳಿಸಿದ ಮಿಂಚೆ/ರೆಸ್ಯುಮೆಯಲ್ಲಿ ಹುಡುಕುತ್ತಿರುತ್ತಾರೆ. ನೀವು ಕವರಿಂಗ್ ಲೆಟರ್ ಕಳಿಸದೆ ಇದ್ದರೆ?? ಇನ್ಬಾಕ್ಸ್ ಅಲ್ಲಿ ಬಿದ್ದ ೧೦೦-೨೦೦ ರೆಸ್ಯುಮೆಯಲ್ಲಿ ಒಂದೊಂದನ್ನೆ ಡೌನ್ ಲೋಡ್ ಮಾಡಿ ಅದನ್ನು ತೆಗೆದು ಕೀವರ್ಡ್‌ಗಾಗಿ ಹುಡುಕುತ್ತಾ ಕೂರುತ್ತಾರೆ ಎಂದು ಭಾವಿಸುತ್ತೀರಾ? ಇಲ್ಲ, ಈ ಪದ್ಧತಿ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಯಾರು ಆ ರೀತಿಯಾಗಿ ಮಾಡುವುದಿಲ್ಲ ಹಾಗಾಗಿ ಕವರಿಂಗ್ ಲೆಟರ್ ಅಲ್ಲಿ ಕೀವರ್ಡ್‌ಗಳು ಕಾಣಿಸುವುದು ಅತ್ಯವಶ್ಯ.
        ಈ ಕೀವರ್ಡ್‌ಗಳು ಯಾವುದು? ಕೀವರ್ಡ್‌ಗಳು - ಹುದ್ದೆಗೆ ಸಂಬಂಧಪಟ್ಟ ಪದಗಳು. ಎತ್ತುಗೆ(ಉದಾಹರಣೆ)ಗೆ, ಹುದ್ದೆಗೆ ಅಗತ್ಯವಿರುವ ಸೂಕ್ತ ಅಭ್ಯರ್ಥಿಯ ಅರ್ಹತೆ  - "ಫ್ರೆಶರ್ /ಅನುಭವಸ್ಥನೊ" ಬೇಕಿದ್ದು "ಇಂತಹ" ಡೊಮೈನ್/ಫೀಲ್ಡ್ ಅಲ್ಲಿ ಪರಿಣಿತಿ ಹೊಂದಿದ್ದು, "ಇಷ್ಟು" ವರ್ಷ ಅನುಭವ ಹೊಂದಿದ್ದು, "ಇಂತಹ" ಪ್ರಾಜೆಕ್ಟ್‌ಗಳ ಮೇಲೆ ಕೆಲಸ ಮಾಡಿದ್ದು ಅಥವಾ "ಇಂತಹ" ಸಾಫ್ಟ್‌ವೇರ್ ಟೂಲ್‌ಗಳ ಜ್ಞಾನವಿದ್ದು. "ಇಂತಹ" ಮನ:ಸ್ಥಿತಿ ಉಳ್ಳ ವ್ಯಕ್ತಿಗಳು ಅಪ್ಪ್ಲೈ ಮಾಡಬಹುದು ಅಂತ ಅವರು ತಿಳಿಸಿದರೆ (ಟೀಂ ಪ್ಲೇಯರ್ ಆಗಿರುವುದು, ಒಂಟಿಯಾಗಿ ಕಮ್ಮಿ ಮಾರ್ಗದರ್ಶನದಲ್ಲಿ, ಒತ್ತಡದ ಪರಿಸ್ಠಿತಿಗಳಲ್ಲಿ, ರಾತ್ರಿ ಪಾಳಿಯಲ್ಲಿ, ತುರ್ತು ಆದೇಶದ ಮೇಲೆ ಕೆಲಸ ಸಂಭಂದಿತ ತಿರುಗಾಟ, ಮಾತುಗಾರಿಕೆಯ ಕಲೆ - ಇಂತಹವು).

       ನಿಮ್ಮ ಕವರಿಂಗ್ ಲೆಟರ್ ಅಲ್ಲಿ ಹೆಚ್ಚು ಹೆಚ್ಚು ಕೀವರ್ಡ್ ಹಾಕಿದರೆ ನಿಮ್ಮ ರೆಸ್ಯುಮೆಯನ್ನು ಪರಿಗಣಿಸಲು ಹೆಚ್ಚು ಸಾಧ್ಯತೆಗಳಿರುತ್ತವೆ. ಕವರಿಂಗ್ ಲೆಟರ್ ಮುಖ್ಯ ಉದ್ದೇಶ ಎಂಪ್ಲಾಯರ್‌ಗೆ ಕಷ್ಟ ಕೊಡದ ರೀತಿ ಅವರು ಬಯಸಿದ ಮಾಹಿತಿಯನ್ನು  ಒದಗಿಸುವುದು  ಹಾಗೆಂದ ಮಾತ್ರಕ್ಕೆ ಕವರಿಂಗ್ ಲೆಟರ್ ಕಥೆಯ ರೀತಿ ಪುಟಗಟ್ಟಲೆ ಇರಬಾರದು ಅದನ್ನು ೩-೪ ಸಾಲಿನ ೩ ಭಾಗಗಳಿಗೆ ಸೀಮಿತವಾಗಿಸಬೇಕು. ಪ್ರತಿ ಭಾಗವು ಒಂದೊಂದು ಮಾಹಿತಿ ನೀಡುವಂತಿರಬೇಕು..

ಭಾಗ ೧ - ಎಂಪ್ಲಾಯರ್‌ ಏನು ಹುಡುಕ್ತಿದಾರೊ ಆ ಕೆಲಸ ಮಾಡಲು ಅಗತ್ಯವಿರುವ ಗುಣ/ಕಲೆ/ಆಸಕ್ತಿ ನಮ್ಮಲಿದೆ ಅಂತ ತೋರಿಸಿಕೊಳ್ಳೊದು. ಎಂಪ್ಲಾಯರ್‌ಗೆ ಈ ಅಭ್ಯರ್ಥಿಯ ಆಸಕ್ತಿ/ಅನುಭವ ಕೆಲಸಕ್ಕೆ ಅನುಗುಣವಾಗಿ ಇದೆ ಅಂತ ಅನಿಸಿದರೆ ಒಂದು ಪರೀಕ್ಷೆಯಲ್ಲಿ ಪಾಸಾದಂತೆ.
  ಹಾಗಾಗಿ ಅವರಿಗೆ ಸೂಕ್ತ ಎನಿಸುವ ಹಾಗೆ, ಅಭ್ಯರ್ಥಿಯು ತಮ್ಮ ಕವರಿಂಗ್ ಲೆಟರ್‌ನ ಮೊದಲನೆ ಭಾಗದಲ್ಲಿ ೨-೩ ಸಾಲುಗಳಲ್ಲಿ ಬರೆಯಬೇಕಾದ ಅಂಶ.. ನಾನು "ಇಂತಹ"(ಅವರಿಗೆ ಬೇಕಾಗಿರುವ) ಕೆಲಸ ನಿರ್ವಹಿಸಿದ್ದೇನೆ,  ಅನುಭವ ಇಲ್ಲದೆ ಹೋದಲ್ಲಿ ನನಗೆ "ಇಂತಹ"(ಹುದ್ದೆಗೆ ತಕ್ಕಂತಹ ವಿಷಯ ಜ್ಞಾನ/ಟೂಲ್ಸ್/ಸಾಫ್ಟ್ವೇರ್) ಜ್ಞಾನ ಇದೆ ಮತ್ತು "ಇಂತಹ"(ಅವರಿಗೆ ಬೇಕಾಗಿರುವ) ಕೆಲಸ ನಿಭಾಯಿಸಲು ಬಹಳ ಆಸಕ್ತನಾಗಿದ್ದೇನೆ ಎನ್ನುವ ಅರ್ಥ ಬರುವ ಸಾಲಿನಲ್ಲಿ ಬರೆಯಬೇಕು.

ಭಾಗ್ ೨ - ಈ ಭಾಗದಲ್ಲಿ ನೀವು "ಮೊದಲನೆ ಭಾಗಕ್ಕೆ ಹೊಂದುವಂತಹ" ನಿಮ್ಮ ಸಾಧನೆ/ವಿಷಯ ಜ್ಞಾನದ ಬಗ್ಗೆ, ರೆಸ್ಯುಮೆಯಲ್ಲಿ ತಿಳಿಸಿರುವ ವಿಷಯದ "ಸಾರ" ಬರೆಯಬೇಕು.      
   ಹಾಗಾಗಿ, ಅಭ್ಯರ್ಥಿಯು ತಮ್ಮ ಕವರಿಂಗ್ ಲೆಟರ್‌ನ ಎರಡನೆ ಭಾಗದಲ್ಲಿ ೪-೫ ಸಾಲುಗಳಲ್ಲಿ ಬರೆಯಬೇಕಾದ ಅಂಶ.. ನನಗೆ "ಇಷ್ಟು"ಪರ್ಸಂಟೇಜ್ ಇದೆ ,"ಇಂತಹ" ಕಾಲೇಜಿನಿಂದ "ಈ" ಬ್ರಾಂಚಿನಲ್ಲಿ, "ಈ" ವರ್ಷದ ಸಾಲಿನಲ್ಲಿ ಪಾಸಗಿದ್ದೇನೆ.ನಾನು ಹುದ್ದೆಗೆ ಅನುಕೂಲವಾಗುವಂತಹ "ಇಂತಹ" ಪ್ರಾಜೆಕ್ಟ್ ಮಾಡಿದ್ದೇನೆ, ಇಂತಹ "ಕೋರ್ಸ್" ಮಾಡಿದ್ದೇನೆ/ಮಾಡುತ್ತಿದ್ದೇನೆ ", "ಇಂತಹ" ತರಬೇತಿ ಪಡೆದಿದ್ದೇನೆ ಎಂದು ಬರೆಯಬೇಕು. ನಾನು ಒಳ್ಳೆಯ ಟೀಂ ಪ್ಲೇಯರ್, ಮಾತುಗಾರ, ಶ್ರದ್ಧೆಯಿಟ್ಟು ಕೆಲಸಮಾಡುವವ, ಜವಾಬ್ದಾರಿಯುತ .. ಎಂದು ಬಿಂಬಿಸಿಕೊಳ್ಳಬೇಕು.

ಒಟ್ನಲ್ಲಿ ನಿಮ್ಮ ಕವರಿಂಗ್ ಲೆಟರ್ ಇಷ್ಟು ಓದುವಷ್ಟರೊಳಗೆ ಎಂಪ್ಲಾಯರ್‌ಗೆ ಅನಿಸಬೇಕಾದ್ದು ಇಷ್ಟು
೧. ಅಭ್ಯರ್ಥಿಗೆ ಯಾವ ರೀತಿಯ ಕೆಲಸ ಖಾಲಿಯಿದೆ ಎಂದು ಜ್ಞಾನವಿದೆ/ ಕೆಲಸಕ್ಕೆ ಸೂಕ್ತ ವಿಷಯ ಜ್ಞಾನ ಇರುವಂತಿದೆ.
೨. ಅಭ್ಯರ್ಥಿಗೆ "ಹೆಚ್ಚಿನ ತರಬೇತಿ" ನೀಡುವ ಅವಶ್ಯಕತೆಯಿಲ್ಲ.
೩. ಇಂಟರ್ವ್ಯೂವ್ ಮಾಡಿದರೆ ಅವನ ಶ್ರದ್ಧೆ/ಮಾತುಗಾರಿಕೆ/ಜಾಣ್ಮೆ ತಿಳಿಯಬಹುದು.
೪. ಪಾಸ್ ಆದ ವರ್ಷ, %(ಅಗ್ರಿಗೇಟ್), ಬ್ರಾಂಚ್ ಎಲ್ಲವು ಸರಿ ಹೊಂದುತ್ತೆ.
  ಇಂಟರ್ವ್ಯೂವ್/ರಿಟನ್ ಟೆಸ್ಟ್‌ಗೆ ಕರೆಯೋಣ ಅಂತ ನಿರ್ಧಾರ ಮಾಡುವ ಮಟ್ಟಕ್ಕೆ ಎಂಪ್ಲಾಯರ್‌ ಆಲೋಚಿಸುತ್ತಾನೆ.

ಭಾಗ್ ೩ - ಈ ಭಾಗಕ್ಕೆ ಬರುವಷ್ಟರಲ್ಲಿ ನೀವು ಅಗತ್ಯವಿದ್ದದೆಲ್ಲ ಹೇಳಿ ಮುಗಿಸಿರಬೇಕು. ಬಾಕಿ ಏನೆ ಇದ್ರು ಅದು ವಿನಯತೆಯಿಂದ ಕೂಡಿದ, ರೆಸ್ಯುಮೆ ಕಳಿಸಿದ್ದರ ಪ್ರತ್ಯುತ್ತರಕ್ಕಾಗಿ ನಿರೀಕ್ಷಿಸುತ್ತಿದ್ದೇನೆ ಎಂಬ ಭಾವದೊಂದಿಗೆ ಕವರಿಂಗ್ ಲೆಟರ್ ಮುಗಿಯಬೇಕು.

ಅಂತ್ಯದಲ್ಲಿ ಯುವರ್ಸ್ ಸಿನ್ಸಿಯರ್ಲಿ ಎನ್ನುವುದರೊಂದಿಗೆ ಮುಗಿದರೆ ಉತ್ತಮ, ಅದಲ್ಲದೆ ಹೋದರು ಖಾಲಿ ಧನ್ಯವಾದಗಳು ಹೇಳುವುದರ ಬದಲಾಗಿ ನಿಮ್ಮ ಸಮಯಕ್ಕಾಗಿ ಧನ್ಯವಾದಗಳು (ಥ್ಯಾಂಕ್ಸ್ ಫಾರ್ ಯುವರ್ ಟೈಮ್)ಎಂದರೆ ಸರಿ.

      ಮುಖ್ಯವಾಗಿ ನಾವು ಅರಿಯಬೇಕಾದದ್ದು, ನಾವು ನಮ್ಮ ಪ್ರಾವೀಣ್ಯತೆಯನ್ನು, ಸಾಧನೆಗಳನ್ನು ಮಾರ್ಕೆಟ್ ಮಾಡಿಕೊಳ್ಳುವುದು. ನಮ್ಮ ಬೆನ್ನನ್ನು ನಾವೆ ತಟ್ಟಿಕೊಳ್ಳಬೇಕು.ಇದರ ಉದ್ದೇಶ, ಖಾಲಿ ಇರುವ ಹುದ್ದೆಗೆ ನಾನು ತಕ್ಕ ಅಭ್ಯರ್ಥಿ ಎಂದು ವ್ಯಕ್ತಪಡಿಸುವುದಕ್ಕಷ್ಟೆ, ಇತರರನ್ನು ಕೀಳಾಗಿ ತೋರಿಸಲು ಅಲ್ಲ ಅಥವಾ ತಾರತಮ್ಯ ಮಾಡಲು ಅಲ್ಲ ಅಥವಾ ಬಡಾಯಿ ಕೊಚ್ಚುವುದು ಸಹ ಉದ್ದೇಶವಲ್ಲ!!  ಸಮರ್ಪಕವಾಗಿ ನಮ್ಮ ಟ್ಯಾಲೆಂಟ್‌ಗಳ ಮಾರ್ಕೆಟ್ ಮಾಡಿಕೊಂಡಷ್ಟು ನಮಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುವುದರಲ್ಲಿ ಸಂಶಯವಿಲ್ಲ.

ಕೊನೆಗೆ ಕುಶಿಯಿಂದ ಹೇಳಬಹುದು ಅಮ್ಮ ನಾ sale ಆದೆ, MNC ಪಾಲಾದೆ ಅಂತ :)   

ಮುಂದಿನಭಾಗದಲ್ಲಿ ರೆಸ್ಯುಮೆ ಫಾರ್ಮ್ಯಾಟ್ ಬಗ್ಗೆ ತಿಳಿಸುತ್ತೇನೆ...

2 comments:

  1. ಅನುಭವ ಕೇಳೋ ಕೆಲಸಗಳಿಗೆ ಅರ್ಜಿ ಬರೆಯುವಾಗ...

    ಸಾವಿರಾರು ಅರ್ಜಿ ಬರುವಾಗ ಯಾವುದಾದರೂ ಸಾಫ್ಟ್ ವೇರ್ ಬಳಸಿ ಕೀ ವರ್ಡ್ ಇರೋ ಅರ್ಜಿಗಳನ್ನು ಹುಡುಕುತ್ತಾರೆ.
    ನಿಮ್ಮ ಅರ್ಜಿಯನ್ನು ಆ ಸಾಫ್ಟ್ ವೇರ್ ಆಯ್ಕೆ ಮಾಡಬೇಕಾದರೆ ಹೀಗೆ ಮಾಡಿ.

    ರೆಸುಮೆ ಕೊನೆಯಲ್ಲಿ ಒಂದು ಪುಟದಲ್ಲಿ ಜಾಹೀರಾತನ್ನು ಯಥಾವತ್ತಾಗಿ ಭಟ್ಟಿ ಇಳಿಸಿ.
    POSITION APPLIED FOR ಅಂತ ಟೈಟಲ್ ಕೊಡಿ ಆ ಪುಟಕ್ಕೆ. ಹಾಗಾಗಿ ಅದು ವಿಚಿತ್ರವಾಗಿ ಕಾಣಿಸಲ್ಲ :)
    ಹಾಗೆ ಒಂದು ಲಿಸ್ಟ್ ಮಾಡಿ.. ಕೇಳಿದ್ದು ಏನು? ನಿಮ್ಮತ್ರ ಇರೋದು ಏನು ಅಂತ. ಕೇಳಿದ್ದು ೫ ವರ್ಷ ಜಾವ; ಇರೋದು ೫ ವರ್ಷ ಸಿ++ ಮತ್ತು ೩ ವರ್ಷ ಜಾವ ಹೀಗೆ.

    ReplyDelete
  2. ಉತ್ತಮ ಸಲಹೆಗೆ ಧನ್ಯವಾದಗಳು, ಒಂದು ಒಳ್ಳೆಯ ಕವರಿಂಗ ಲೆಟರ್ ಹಾಗು ಆಕರ್ಷಕ ಫಾರ್ಮ್ಯಾಟ್ ಇರೊ ರೆಸ್ಯುಮೆ ಮಾಡುವುದು continous improvemnet process ಅಡಿಯಲ್ಲಿ ಬರುತ್ತದೆ ಅಲ್ಲವೆ:)

    ReplyDelete