Wednesday, February 23, 2011

ಕೆಲಸ ಗಿಟ್ಟಿಸಿಕೊಳ್ಳುವ ಸುಲಭ ಸೂತ್ರಗಳು.. ೫

ರೆಸ್ಯುಮೆಯಲ್ಲಿ ಕೊನೆಯದಾಗಿ ಉಳಿಯುವುದು ಪರ್ಸನಲ್  ಡಿಟೇಲ್ ಹಾಗು ಡಿಕ್ಲೆರೇಷನ್

ಪರ್ಸನಲ್  ಡಿಟೇಲ್ ಸಹ ಕಡೆಗಣಿಸಲಾಗದ ಒಂದು ಮುಖ್ಯ ವಿಭಾಗ ಯಾಕೆಂದರೆ ಈ ವಿಭಾಗದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ!! ನಿಮ್ಮ ಗುರಿ, ಶೈಕ್ಷಣಿಕ ವಿಭಾಗ, ಕೆಲಸ, ಅನುಭವ, ಸ್ಕಿಲ್ಸ್ ಎಲ್ಲಾ ಸರಿಯಿದ್ದು ವೈಯಕ್ತಿಕವಾಗಿ ನಿಮ್ಮ ನಡೆ ನುಡಿ ಸರಿ ಕಾಣಲಿಲ್ಲವೆಂದರೆ ಯಾರು ಯಾಕೆ ತೊಗೊತಾರೆ? ನಿಮ್ಮ ವ್ಯಕ್ತಿತ್ವ ನೀವು ಕೆಲಸ ನಿರ್ವಹಿಸುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ರೆಸ್ಯುಮೆ ನೋಡುವವರು ಪರ್ಸನಲ್  ಡಿಟೇಲ್ ವಿಭಾಗದಲ್ಲಿ ಹೆಚ್ಚಿನ ಮಹತ್ವ ನೀಡದಿದ್ದರೂ ಸಹ ಅಲ್ಲಿ ನೀವು ತಿಳಿಸುವ ಮಾಹಿತಿ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಿಮ್ಮ ವ್ಯಕ್ತಿತ್ವ ಒಳ್ಳೆಯದು ಎನ್ನುವ ಭಾವ ಮೂಡಿದರೆ ಈ ವಿಭಾಗ ಇರುವುದು ಸಾರ್ಥಕವಾಗುತ್ತದೆ.
         ಈ ವಿಭಾಗದ ಉದ್ದೇಶ ಅರ್ಥವಾದ ಮೇಲೆ ಇಲ್ಲಿ ತಿಳಿಸುವ ಅಥವಾ ತಿಳಿಸಬೇಕಾದ ವಿಚಾರ ಯಾವುದು ಎಂದು ನೋಡಿದಾಗ ಕಾಣುವುದು

ಅ.ಹುಟ್ಟಿದ ದಿನಾಂಕ ಹಾಗು ವರ್ಷ / ವಯಸ್ಸು - ಇದು ಇರುವುದು ಅಭ್ಯರ್ಥಿಯ ವಯಸ್ಸು ತಿಳಿದುಕೊಳ್ಳುವುದಕ್ಕೆ. ಕೆಲವರಿಗೆ ಅಭ್ಯರ್ಥಿ ಇಷ್ಟು ವಯಸ್ಸಿನವರಾಗಿರಬೇಕು ಎಂದು ಹುಡುಕುತ್ತಿರುತ್ತಾರೆ ಅಂತಹ ಸಮಯದಲ್ಲಿ ಇಲ್ಲಿ ತಿಳಿಸಿದರೆ ಸುಲಭವಾಗಿ ತಿಳಿಯುತ್ತದೆ.

ಆ.ಭಾಷೆ - ಎಲ್ಲಾ ಓಕೆ, ಕನ್ನಡಿಗರು ಎಂದ ಮೇಲೆ ತಮಿಳು, ತೆಲುಗು, ಹಿಂದಿ, ಮರಾಠಿ ಎಲ್ಲಾ ಯಾಕೆ?  ನೀವು ಭಾಷೆ ವಿಭಾಗದಲ್ಲಿ ಆಂಗ್ಲ, ಕನ್ನಡ ಬಿಟ್ಟು ಬೇರೆ ಯಾವ ಭಾರತೀಯ ಭಾಷೆ ಹಾಕಿಕೊಂಡರು ನಿಮಗೆ ಕೆಲಸ ಸಿಗುವುದಕ್ಕೆ ಸಹಾಯಕವಾಗುವುದಿಲ್ಲ!! ಆದರೆ ಕನ್ನಡೇತರರಿಗೆ ಅವರ ಭಾಷೆ ಕನ್ನಡಿಗರ ನಾಲಿಗೆಯೆ ಮೇಲೆ ಹಾರಿದಾಡುತ್ತಿರುವುದರ ಬಗ್ಗೆ ಅಹಂಕಾರ ಹುಟ್ಟಿ ಕನ್ನಡಕ್ಕೆ ಅಪಮಾನ ಮಾಡುವ ಸಾಧ್ಯತೆ ಇದೆ. ಅವರು ನಮ್ಮ ಭಾಷೆ ಕಲಿಯುವುದಿಲ್ಲ ಆದರೆ ನಾವು ಅವರ ಭಾಷೆ ಕಲಿತು ಅವರು ಕನ್ನಡಿಗರಾಗದೆ ಇರುವ ತಡೆ ಗೋಡೆಯಂತಾಗುತ್ತೇವೆ.
          ಹುಟ್ಟಿರುವುದು ಕರ್ನಾಟಕದಲ್ಲಿ, ನೆಲೆಸಿರುವುದು ಕರ್ನಾಟಕದಲ್ಲಿ, ಹೊಟ್ಟೆಪಾಡು ಎಲ್ಲವು ಕರ್ನಾಟಕದ್ದು ಅಂದ ಮೇಲೆ ಮಾತೃಭಾಷೆ ಯಾವುದೆ ಆಗಿದ್ದರು ಸಹ ಅವರು ಕನ್ನಡಿಗರೆ ಆಗುತ್ತಾರೆ ಅಲ್ಲವೆ? ಮಾತೃಭಾಷೆ ಎನ್ನುವ ಒಂದೆ ಆಧಾರದ ಮೇಲೆ ಕನ್ನಡಿಗರೆ, ಕನ್ನಡಿಗರೇತರು ಅಂತಾ ವಿಂಗಡಿಸಿದರೆ ಅವರು ಎಂದಿಗೂ ಕನ್ನಡದವರಾಗ್ಲು ಸಾಧ್ಯವೇ ಇಲ್ಲ. ಆ ರೀತಿ ಎಣಿಸಿದರೆ ಡಿವಿಜಿ,ಬೇಂದ್ರೆ,ಮಾಸ್ತಿ,ಕೈಲಾಸಂ ಅವರನ್ನೆಲ್ಲಾ ಕನ್ನಡಿಗರೆನ್ನುವುದಕ್ಕೆ ಆಗುವುದೆ ಇಲ್ಲ!! ಆ ರೀತಿ ಆದರೆ ತಪ್ಪು ಅಲ್ವ? ಮಾತೃ ಭಾಷೆ ಯಾವುದೆ ಇರಲಿ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಅಭಿಮಾನವಿರುವ ಪ್ರತಿಯೊಬ್ಬರು ಸಹ ಕನ್ನಡಿಗರೆ ಆಗುತ್ತಾರೆ. ಯಾವ ಭಾಷೆ ಕಲಿಯುವುದು ತಪ್ಪಲ್ಲ ಆದರೆ ಇಲ್ಲಿ ನೆಲಸಿದವರಿಗೆ ಕನ್ನಡ ಕಲಿಸದೆ ಅನಗತ್ಯ ಭಾಷ್ಯಾ ಪಾಂಡಿತ್ಯ ಪ್ರದರ್ಶಿಸುವುದಕ್ಕೆ ನಮ್ಮ ಪ್ರಾಡಕ್ಟ್ ಆದ ಕನ್ನಡ ಮರೆತು ಇತರರ ಭಾಷೆಯಲ್ಲೆ ಮಾತಾಡಿ ಸರ್ವೀಸ್ ಕೊಟ್ಟರೆ ಅವರು ಯಜಮಾನರಂತೆ ನಾವು ಸೇವಕರಂತೆ ನಡೆದುಕೊಂಡ ರೀತಿ ತಾನೆ?
      ನಮ್ಮನ್ನು ನಮ್ಮ ಕನ್ನಡವನ್ನು ಬಲಹೀನವೆಂದು ಗೇಲಿ ಮಾಡದೆ ಇರುತ್ತಾರೆಯೆ? ಕನ್ನಡಿಗರ ನಾಲಿಗೆಯಲ್ಲೆ ಕನ್ನಡವಿರದೆ
ಬೇರ್ಯಾವುದೊ ಇದ್ದರೆ ಕನ್ನಡವೇ ಬಲಹೀನ ಎಂದು ವ್ಯಂಗವಾಡುತ್ತಾರೆ. ಈ ಸೂಕ್ಷ್ಮಗಳೆಲ್ಲವು ಕಂಪನಿಯ ಒಳಗೆ ಕಾಲಿಟ್ಟ ತಕ್ಷಣ ಕಾಣುತ್ತದೆ, ಈಗಲೆ ಎಚ್ಚೆತ್ತುಕೊಂಡರೆ ನಮ್ಮ ಮಾನ ಉಳಿಸಿಕೊಂಡಂತೆ, ಕನ್ನಡವನ್ನು ಹಾಗು ಕನ್ನಡತನವನ್ನು ಎತ್ತಿಹಿಡಿದಂತೆ.
   
>>>>> ೨೦೧೧ ಜನಗಣತಿ ಆರಂಭವಾಗಿದೆ. ಜನಗಣತಿಯ ವೇಳೆ ಮಾತೃಭಾಷೆಯನ್ನು ಬರೆಸಿಕೊಳ್ಳುತ್ತಾರೆ. ನಿಮ್ಮ ಮನೆಯಲ್ಲಿ ಯಾವುದೇ ಭಾಷೆ ಮಾತನಾಡುತ್ತಿದ್ದರೂ ದಯವಿಟ್ಟು "ಕನ್ನಡ"ಮತ್ತು ಇತರೆ ಭಾಷೆಯಲ್ಲಿ "ಇಂಗ್ಲಿಷ್" ಮಾತ್ರ ಎಂದು ಕಡ್ಡಾಯವಾಗಿ ಬರೆಸಿ. ಒಂದು ವೇಳೆ ನೀವು ಮನೆಯಲ್ಲಿ ಇಲ್ಲದ್ದಿದ್ದರೆ, ನಿಮ್ಮ ತಂದೆ ಅಥವಾ ತಾಯಿಗೆ "ಕನ್ನಡ" ಇತರೆ ಭಾಷೆಯಲ್ಲಿ "ಇಂಗ್ಲಿಷ್" ಎಂದು ಬರೆಸಲು ಹೇಳಿ. ಇದು ಏಕೆ ಮುಖ್ಯ ಎಂದರೆ, ಬೆಂಗಳೂರಿನಲ್ಲಿ ಕೇವಲ ೩೦ ರಷ್ಟು ಕನ್ನಡಿಗರು ಇರೋದು ಅದು ಇದು ಅಂತ ತಪ್ಪಾದ ಮಾಹಿತಿ ಕೊಟ್ಟು ಕನ್ನಡಕ್ಕೆ ಸಿಗಬೇಕಾದ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ ಇದರ ಮೇಲೆ ಕನ್ನಡ ಮೆರೆಯಬೇಕಾದ ಜಾಗದಲ್ಲೆಲ್ಲಾ ಹಿಂದಿ ಹೇರುತ್ತಾರೆ!! ಇಲ್ಲಿ ಹುಟ್ಟಿ ಇಲ್ಲೆ ಬೆಳೆದ ಮೇಲೆ ನೀವು ಕನ್ನಡಿಗರು ತಾನೆ? ಮಾತೃ ಭಾಷೆ ಯಾವುದಿದ್ದರೇನು ಮೆರೆಯಬೇಕಾದ್ದು ಕರ್ನಾಟಕದ ಭಾಷೆ ಅಲ್ಲವೆ? ನೀವು ಮನೆಯಲ್ಲಿ ಉರ್ದು, ತೆಲುಗು, ತಮಿಳು, ಹೀಗೆ ಯಾವುದೇ ಭಾಷೆಯನ್ನು ಮಾತಾಡುತ್ತಿದ್ದರೂ "ಕನ್ನಡ" ಎಂದೆ ಹೇಳಿ. ಈ ಸಂದೇಶವನ್ನು ಎಲ್ಲಾ ಕಡೆ (facebook, twitter, orkut, gtalk message)  ಹಬ್ಬಿಸಿ ಭಾಷೆಯ ಬೆಳವಣಿಗೆಗೆ ಕಾರಣರಾಗಿ. 'ನಿಮಗೆ ಗೊತ್ತಿರುವ ಇತರ ಭಾಷೆಗಳು' ಎಂಬ ಕಡೆ 'ಹಿಂದಿ'ಎಂದು ಕಡ್ಡಾಯವಾಗಿ ಬರೆಸಬೇಡಿ ಕೇವಲ ಇಂಗ್ಲಿಷ್ ಎಂದು ಮಾತ್ರ ತಿಳಿಸಿ. ಇದರಿಂದ ಬಹಳ ಜನರು ಕರ್ನಾಟಕದಲ್ಲಿ ಹಿಂದಿ ಬಳಸುತ್ತಾರೆ ಎಂಬ ತಪ್ಪು ಮಾಹಿತಿ  ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಮತ್ತು ಇದು ವಿವಿಧ ಯೋಜನೆಗಳು ಉದ್ಯೋಗ, ಸ್ಪರ್ಧಾತ್ಮಕ  ಪರೀಕ್ಷೆಗಳು, ಜಾಹೀರಾತುಗಳು ಮುಂತಾದ ಕಡೆ ಹಲವು ರೀತಿಯಲ್ಲಿ ಕನ್ನಡವನ್ನು ಕನ್ನಡಿಗರನ್ನು ಕಡೆಗಣಿಸಿ ಹಿಂದಿಯನ್ನು ಕರ್ನಾಟಕದಲ್ಲಿ ಹೇರಲು ದಾರಿಮಾಡಿಕೊಟ್ಟಂತಾಗುತ್ತದೆ.<<<<<<

     ನೀವು ಕಲಿಯಬೇಕಾದ ಭಾಷೆ ಜರ್ಮನ್, ಜಪಾನೀಸ್, ಸ್ಪ್ಯಾನಿಷ್, ಫ್ರೆಂಚ್.. ಇಂಥವನ್ನು ಕಲಿತರೆ ಕನಿಷ್ಟ ಉದ್ಯೋಗ ದೊರೆಯುವುದಕ್ಕಾದರು ಸಹಾಯವಾಗುತ್ತದೆ. ೩-೬ ತಿಂಗಳ ಸರ್ಟಿಫಿಕೇಷನ್ ಕೋರ್ಸ್ ಮಾಡಿಕೊಂಡು ಹಾಕಿಕೊಂಡರೆ ಅತೀ ಬೇಡಿಕೆಯಿರುವ ಬೈ-ಲಿಂಗುಯಲ್ ಸಾಫ್ಟ್‌ವೇರ್ ಇಂಜಿನೀಯರ್ / ಟ್ರಾನ್ಸ್‌ಲೇಟರ್ / ಫ್ರೀಲಾನ್ಸ್ ಇಂಗ್ಲಿಷ್ ಟು ಜರ್ಮನ್ / ಜಪಾನೀಸ್ / ಸ್ಪ್ಯಾನಿಷ್ / ಫ್ರೆಂಚ್ ಪ್ರಾಜೆಕ್ಟ್ಸ್ ಪಾರ್ಟ್ ಟೈಮ್ ಕೆಲಸ ಮಾಡಬಹುದು, ಮನೆಯಲ್ಲೆ ಇದ್ದು ಕೈ ತುಂಬಾ ಸಂಪಾದಿಸಬಹುದು!!

ನಿಮ್ಮನ್ನು/ನಿಮ್ಮ ರೆಸ್ಯುಮೆಯನ್ನು ಗಮನದಲ್ಲಿಟ್ಟುಕೊಳ್ಳಲು ಇಂತಹ ಭಾಷೆ ಸಹಕಾರಿ.
  
ಆ.ಹವ್ಯಾಸಗಳು ಹಾಗು ಆಸಕ್ತಿಗಳು - ಇವು ನಿಮ್ಮಲ್ಲಿಯ "ಟೀಮ್ ಸ್ಪಿರಿಟ್", "ಲಾಜಿಕಲ್ ಥಿಂಕಿಂಗ್", "ಕ್ರಿಯೆಟಿವಿಟಿ", "ಕಾಂಪಿಟೆಟಿವ್ನೆಸ್", "ಲರ್ನಿಂಗ್ ಅಟೀಟ್ಯುಡ್".. ಇಂಥವನ್ನು ಗುರುತಿಸಲು ಸಹಾಯಕವಾಗುವುದು. ಇಷ್ಟೆಲ್ಲಾ ಯಾಕೆ ಬೇಕು ಅಂದರೆ, ಒಂದು ಕಂಪನಿ ಅಂದಮೇಲೆ ನಾವು ಹಲವರೊಡನೆ ಕೂಡಿ ಒಂದು ನಿರ್ದಿಷ್ಟ ಯೋಜನೆ ಮೇಲೆ ಕೆಲಸ ಮಾಡಬೇಕಾಗುತ್ತದೆ. ಮನೆ ಸದಸ್ಯರ ಅಭಿಪ್ರಾಯಗಳು, ಕಾರ್ಯ ವೈಖರಿ, ಜೀವನ ಶೈಲಿ ಬೇರೆ ಬೇರೆ ತೆರನಾಗಿದ್ದರು ಸಹ ಒಂದಾಗಿ ಬಾಳುವಂತೆ ತಂಡದಲ್ಲಿರುವವರ ಅಭಿಪ್ರಾಯಗಳು, ಕಾರ್ಯ ವೈಖರಿಗಳೂ ಸಹ ಭಿನ್ನವಿರುತ್ತವೆ ಅಂತಹ ಪರಿಸ್ಥಿತಿಯಲ್ಲಿ ಸಹ ಹೊಂದಿಕೊಂಡು ಕೆಲಸ ಮಾಡಬಲ್ಲೆ ಎಂಬಂತೆ ಬಿಂಬಿಸಿಕೊಳ್ಳಬೇಕು ಪ್ಲೇಯಿಂಗ್ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಖೊ ಖೊ.. ತಂಡಕೂಡಿ ಆಡುವ ಮುಂತಾದ ಆಟ ಹೆಸರಿಸಬಹುದು. ನಂತರ ಲಾಜಿಕಲ್ ಥಿಂಕಿಂಗ್ ಬಿಂಬಿಸಿಕೊಳ್ಳಲು ಸಾಲ್ವಿಂಗ್ ಪಝಲ್ಸ್, ಕ್ರಾಸ್ ವರ್ಡ್, ಚೆಸ್ ... ಮುಂತಾದವು. "ಕ್ರಿಯೆಟಿವಿಟಿಗೆ" ಸ್ಕೆಚಿಂಗ್, ಚಿತ್ರಕೆಲೆ, ಹೂ ಅಲಂಕಾರ.. "ಕಾಂಪಿಟೆಟಿವ್ನೆಸ್" ಯಾವುದಾದರು ಆಟಗಳನ್ನು ತಿಳಿಸಬಹುದು, "ಲರ್ನಿಂಗ್ ಅಟೀಟ್ಯುಡ್" ಇದಕ್ಕೆ ನೀವು ಪುಸ್ತಕ, ತಂತ್ರಜ್ಞಾನ ಸಂಬಂಧಿತ ಲೇಖನ ಓದುವುದು.. ಎಂದು ತಿಳಿಸಬಹುದು. ಯೋಗ, ಸಂಗೀತ/ ಹಾಡು ಕೇಳುವುದು ಇಂಥವನ್ನು ಸಹ ತಿಳಿಸಬಹುದು, ಹೀಗೆ ನಾಲ್ಕು ಅಥವಾ ಐದು ಅಂಶಗಳನ್ನು ತಿಳಿಸಿದರೆ ಚೆನ್ನಾಗಿರುತ್ತದೆ. ಫೇಸ್ ಬುಕ್, ಆರ್ಕುಟ್,
ಸೊಷಿಯಲ್ ವೆಬ್ ಸೈಟ್ ಗಳು ಇಲ್ಲಿ ಬರಲೇಬಾರದು..


ಕೊನೆಯದಾಗಿ ನೀವು ಡೆಕ್ಲೆರೇಷನ್ ಮಾಡುವುದರೆ ಕೈಗೆ ತೆಗೆದುಕೊಂಡ ಕೆಲಸ ಮೊದಲಿನಿಂದ ಕೊನೆಯವರೆಗು ಅಚ್ಚುಕಟ್ಟಾಗಿ ನಿರ್ವಹಿಸಿದಂತೆ ಆಗುತ್ತದೆ.
ಡೆಕ್ಲೆರೇಷನ್ ಅಲ್ಲಿ ಇರಬೇಕಾದ ಸಾಲು - ಐ ಹೆಯರ್ ಬೈ ಡಿಕ್ಲೇರ್ ದಟ್ ದಿ ಅಬವ್ ಫರ್ನಿಷೆಡ್ ಇನ್ಫಾರ್ಮೇಷನ್ ಇಸ್ ಟ್ರೂ ಟು ದಿ ಬೆಸ್ಟ್ ಆಫ್ ಮೈ ನಾಲೆಡ್ಜ್. ಈ ಅರ್ಥ ಬರುವ ಇತರೆ ಸಾಲನ್ನು ಸಹ ನೀವು ಬರೆಯಬಹುದು.

ಡೆಕ್ಲೆರೇಷನ್ ಸಾಲಿನ ಕೆಳಗೆ ಪುಟದ ಎಡಗಡೆಯಲ್ಲಿ ಸ್ಠಳ ಹಾಗು ಆ ಸಾಲಿನ ಕೆಳಗೆ ದಿನಾಂಕ ಬರೆಯಬೇಕು, ಸ್ಥಳದ ಸಾಲಿನ ಪುಟದ ಬಲಗಡೆಯ ತುದಿಯಲ್ಲಿ ನಿಮ್ಮ ಹೆಸರು ನಮೂದಿಸಿ ಅಲ್ಲಿ ಸಹಿ ಮಾಡುವಷ್ಟು ಜಾಗ ಬಿಟ್ಟಿರಬೇಕು,  

ಇಲ್ಲಿಗೆ ರೆಸ್ಯುಮೆ ಸಿದ್ಧಪಡಿಸುವುದರ ಸಂಬಂಧಿತ ವಿಚಾರ ಆಯಿತು ಆದರೆ ಇಷ್ಟಕ್ಕೆ ಎಲ್ಲವು ಮುಗಿದಂತಲ್ಲ, ಒಂದು ಮೈಲಿಗಲ್ಲು ತಲುಪಿದಂತಷ್ಟೆ. ನೀವು ಈ ರೀತಿಯ ಒಂದು ಸರಳವಾಗಿ ಕಾಣುವಂತಹ, ಅಚ್ಚುಕಟ್ಟಾಗಿ ವಿಂಗಡಿಸಿದ ಹಾಗು "ಉಪಯುಕ್ತ" ಮಾಹಿತಿಯುಕ್ತವಾದ ವಿಭಾಗಗಳಿರುವ ರೆಸ್ಯುಮೆ ತಯಾರು ಮಾಡಿ ಕಳಿಸಿ ಅದು ಶಾರ್ಟ್ ಲಿಸ್ಟ್ ಆಗಿ ನಿಮಗೆ ರಿಟನ್ ಟೆಸ್ಟ್ ಕರೆ ಬಂದಾಗ ನಿಮಗೆ ನೀವು ತಯಾರಿ ಹೇಗೆ ತೆಗೆದುಕೊಳ್ಳಬಹುದು, ಯಾವ ಪುಸ್ತಕಗಳು ಸಹಾಯಕವಾಗಬಹುದು ಎಂದು ಮುಂದಿನ ಕಂತಿನಲ್ಲಿ ನೊಡೋಣ.

ವಿ.ಸೂ: ಜನಗಣತಿಯಲ್ಲಿ, ತಿಳಿದಿರುವ ಭಾಷೆ ಕೇವಲ ಕನ್ನಡ ಹಾಗು ಇಂಗ್ಲಿಷ್ ಮಾತ್ರ ಎಂದು ಬರೆಸಲು ಮರೆಯಬೇಡಿ, ಹಿಂದಿಯಂತು ಬೇಡವೆ ಬೇಡ ಸದ್ಯಕ್ಕೆ ಅದರಿಂದಾಗುತ್ತಿರುವ ಅನ್ಯಾಯವೆ ಸಾಕು. ನೀವಿಲ್ಲದಿದ್ದರೊ ಮನೆಯವರೊಂದಿಗೂ ಸಹ ಈ ಮಾತು ತಿಳಿಸಿ. ನಿಮ್ಮ ಸ್ನೇಹಿತರೊಂದಿಗೂ ಸಹ ವಿಷಯ ಹಂಚಿಕೊಳ್ಳಿ
ಕನ್ನಡ.. ಕರ್ನಾಟಕ.. ಬೆಳಗಲಿ.. ಕನ್ನಡಿಗ ಉದ್ಧಾರವಾಗಲಿ..

ಮುಂದುವರೆಯುತ್ತದೆ...  


-- ಧನ್ಯವಾದಗಳು


2 comments:

  1. ನಮಸ್ತೆ,

    ನಿಮ್ಮ ಬ್ಲಾಗ್ ನ ಎಲ್ಲಾ ಬರಹಗಳನ್ನೂ ಓದಿದೆ. ವಿಷಯಗಳು ಬಹಳ ಪ್ರಯೋಜನಕಾರಿಯಾಗಿವೆ. ಬರೆಯುತ್ತಿರಿ. ಕನ್ನಡದ ಹುಡುಗರಿಗೆ ಸಹಾಯ ಆಗಬಹುದು.

    ReplyDelete